ಮಡಿಕೇರಿ, ಜು. 6: ಕಳೆದ ಹತ್ತು ವರ್ಷಗಳಿಂದ ದುಬಾರೆಯ ಸಾಕಾನೆ ಶಿಬಿರದಲ್ಲಿ ಗಜಗಳ ಪಾಲನೆ-ಪೋಷಣೆಯೊಂದಿಗೆ ಬದುಕು ಕಟ್ಟಿಕೊಂಡಿದ್ದ ಕಾವಡಿಗ ನೊಬ್ಬ ಇಂದು ನಿತ್ಯ ಕಣ್ಣೀರಿ ನೊಂದಿಗೆ ಅಸಹಾಯಕ ಸ್ಥಿತಿಯಲ್ಲಿ ಜೀವನ ಕಳೆಯುವಂತಾಗಿದೆ. ಕಷ್ಟಕಾಲದಲ್ಲಿ ತನ್ನನ್ನು ದುಡಿಸಿ ಕೊಳ್ಳುತ್ತಿರುವ ಅರಣ್ಯ ಇಲಾಖೆಯು ನಿರ್ಲಕ್ಷ್ಯದೊಂದಿಗೆ ಹತ್ತು ತಿಂಗಳಿ ನಿಂದ ಮಾಸಿಕ ವೇತನ ನೀಡದ ಪರಿಣಾಮ ಈತನ ಬದುಕು ಇನ್ನಷ್ಟು ಶೋಚನೀಯವಾಗಿದೆ.(ಮೊದಲ ಪುಟದಿಂದ) ಒಂದೆಡೆ ವಿಧಿಯಾಟಕ್ಕೆ ಸಿಲುಕಿ ತನ್ನ ಕಾಲೊಂದನ್ನು ಕಳೆದುಕೊಂಡಿರುವ ಈ ಕಾವಡಿಗನಿಗೆ ಇದೀಗ ದಿಕ್ಕು ತೋಚದಂತಾಗಿದೆ. ಪತಿಯ ಕಷ್ಟದಿಂದ ಕೈ ಹಿಡಿದ ಪತ್ನಿಯೂ ಮೂಕವೇದನೆ ಅನುಭವಿಸುತ್ತಿದ್ದರೆ, ಮೂವರು ಮಕ್ಕಳು ಜನ್ಮಕೊಟ್ಟ ತಂದೆಯ ಪರಿಸ್ಥಿತಿಗಾಗಿ ಮರುಗುತ್ತಿದ್ದಾರೆ.ದುಬಾರೆಯ ಕಾಡಿನ ನಡುವೆ ಸಾಕಾನೆಗಳನ್ನು ಸಲಹುತ್ತಾ; ಕಳೆದು ಹೋದ ಹತ್ತು ವರ್ಷಗಳಿಂದ ಹೇಗೋ ಅರಣ್ಯ ಇಲಾಖೆಯು ನೀಡಿರುವ ಕೆಲಸ ಮಾಡುವ ಮುಖಾಂತರ ಎಂಟು ವರ್ಷಗಳನ್ನು ಅತ್ಯಲ್ಪ ಸಂಬಳದಲ್ಲಿ ಕಳೆದಿರುವ ಈ ಕಾವಡಿಗ ಇಂದು ಅಸಹಾಯಕನಾಗಿ ಕಣ್ಣೀರಿಡುತ್ತಿದ್ದಾನೆ.ಆಕಸ್ಮಿಕ ದುರಂತ: ದುಬಾರೆ ಸಾಕಾನೆ ಶಿಬಿರದಲ್ಲಿ ಕಂಚನ್ ಎಂಬ ಸಾಕಾನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಜೆ.ಬಿ. ಗೋಪಾಲ (27) ಎಂಬಾತ ಹತ್ತು ತಿಂಗಳ ಹಿಂದೆ ಆನೆಗಳನ್ನು ಕಾಡಿನೊಳಗೆ ಬಿಟ್ಟಿದ್ದು, ಸಂಜೆ ಎಂದಿನಂತೆ ಶಿಬಿರಕ್ಕೆ ಕರೆತರಲು ತೆರಳಿದ್ದಾನೆ. ಈ ಸಂದರ್ಭ ಆಕಸ್ಮಿಕ ಕಾಲಿಗೆ ಮುಳ್ಳು ಚುಚ್ಚಿದೆ. ದಿನಗಳು ಉರುಳಿದಂತೆ ಮುಳ್ಳು ಹೊರ ತೆಗೆದ ಬೆರಳಿನ ಬಳಿ ಗಾಯಉಂಟಾಗಿ ಕೀವು ಕಾಣಿಸಿಕೊಂಡಿದೆ.ಈ ವೇಳೆ ದುಬಾರೆ ಶಿಬಿರದ ಉಸ್ತುವಾರಿ ಹೊಂದಿರುವ ಅರಣ್ಯಾಧಿಕಾರಿ ರಂಜನ್, ಈತನನ್ನು ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂದರ್ಭ ವೈದ್ಯರು; ವಿಷಪೂರಿತ ಮುಳ್ಳು ಚುಚ್ಚಿರುವ ಕಾರಣ ಅಪಾಯ ಉಂಟಾಗಿದ್ದು, ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ.

ಆ ಮೇರೆಗೆ ಈತನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ಸೇರಿಸಲಾಗಿದೆ. ಕುಶಾಲನಗರ ಸಾಕಾನೆ ಶಿಬಿರದಲ್ಲಿ ಮಾವುತರಾಗಿರುವ ಈತನ ತಂದೆ ಬೋಜಪ್ಪ ಆಸ್ಪತ್ರೆಯಿಂದ ಮರಳಿ ಕರೆ ತಂದು ನಾಟಿ ಔಷಧಿ ಮಾಡಲು ಪ್ರಯತ್ನಿಸಿದ್ದಾರೆ.

ತೀವ್ರ ಉಲ್ಬಣ: ದಿನಗಳು ಉರುಳಿದಂತೆ ಗೋಪಾಲ್ ಎಡಗಾಲು ಬಾತುಕೊಂಡು, ಗಾಯ ಇನ್ನಷ್ಟು ಉಲ್ಬಣಿಸಿ, ತೀವ್ರ ಕಾಣಿಸಿಕೊಂಡು ಪಾದ ಕೊಳೆಯುವಂತಾಗಿದೆ. ಅನ್ಯ ಮಾರ್ಗವಿಲ್ಲದೆ ಮತ್ತೆ ಈತನನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಈ ನಡುವೆ ವೈದ್ಯರು ಅಪಾಯ ಅರಿತು ಮೊಣಕಾಲು ತನಕ ಕತ್ತರಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಬದಲಿ ವ್ಯವಸ್ಥೆ: ತನ್ನ ಕಾಲಿನ ಗಾಯ ಉಲ್ಬಣಗೊಳ್ಳುತ್ತಿದ್ದಂತೆಯೇ, ಗೋಪಾಲ ಕೆಲಸಕ್ಕೆ ತೆರಳಲಾರದೆ ಒಂದಿಷ್ಟು ಸಮಯ ತನ್ನ ಸಂಬಂಧಿ ಪ್ರವೀಣ್ ಎಂಬಾತನಿಗೆ ಕೈಯಿಂದ ರೂ. 5 ಸಾವಿರದಂತೆ ಕೂಲಿ ನೀಡಿ ತಾನು ನಿರ್ವಹಿಸುತ್ತಿದ್ದ ಕೆಲಸಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾನೆ.

ವೇತನ ಸ್ಥಗಿತ: ಹೀಗೆ ಹತ್ತು ತಿಂಗಳು ಕಳೆಯುವಷ್ಟರಲ್ಲಿ ಅರಣ್ಯ ಇಲಾಖೆಯು ಮಾಸಿಕ ವೇತನ ತಡೆ ಹಿಡಿದಿದೆ. ಕಾರಣ ಕೇಳಲಾಗಿ ಅನಿಯಮಿತ ಗೈರು ಹಾಜರಿಯೊಂದಿಗೆ, ಕಾಲಿನ ಸಮಸ್ಯೆ ಕುರಿತು ಯಾವದೇ ವೈದ್ಯಕೀಯ ದೃಢೀಕರಣ ಪತ್ರ ಸಲ್ಲಿಸಿಲ್ಲವೆಂಬ ಪ್ರತಿಕ್ರಿಯೆ ಲಭಿಸಿದೆ.

ತಿಳುವಳಿಕೆ ಕೊರತೆ: ಎಂಟು ವರ್ಷಗಳ ಕಾಲ ದಿನಗೂಲಿಯಾಗಿ ದುಡಿದಿರುವ ಗೋಪಾಲ್‍ಗೆ ಕೇವಲ ಖಾಯಂ ಉದ್ಯೋಗ ಲಭಿಸಿ ಎರಡು ವರ್ಷ ಕಳೆದಿದ್ದು, ವಿದ್ಯಾಭ್ಯಾಸದ ಕೊರತೆ ನಡುವೆ ಏನೂ ಮಾಡುವ ಅನುಭವವಿಲ್ಲದೆ ಬಳಲತೊಡಗಿದ್ದಾರೆ.

ಇಲ್ಲಿ ವಾಸ್ತವ ತಿಳಿದು ಕಾಲು ಕಳೆದುಕೊಂಡಿರುವ ಕಾವಾಡಿಗನಿಗೆ ಅರಿವು ಮೂಡಿಸಿ ನೆರವು ನೀಡಬೇಕಿರುವ ಅರಣ್ಯ ಇಲಾಖೆ, ಕಾನೂನಿನ ಕುಂಟು ನೆಪ ಹೇಳಿ ಹತ್ತು ತಿಂಗಳಿನಿಂದ ಮಾಸಿಕ ವೇತನ ತಡೆ ಹಿಡಿದಿದೆ. ಹೀಗಾಗಿ ಪರಿಸ್ಥಿತಿಯ ಒತ್ತಡದಲ್ಲಿ ಆಸ್ಪತ್ರೆ ಸೇರಿರುವ ಈತ ಮಾಸಿಕ ಸಂಬಳವಿಲ್ಲದೆ, ಕಾಲು ಕಳೆದುಕೊಂಡು ಕಣ್ಣೀರು ಇಡುವಂತಾಗಿದೆ.

ಮಾನವೀಯ ಸ್ಪಂದನ ಅಗತ್ಯ: ಒಂದೆಡೆ ಅಕ್ಷರ ಜ್ಞಾನದ ಕೊರತೆ ನಡುವೆ; ವೈದ್ಯಕೀಯ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆದುಕೊಳ್ಳದ ಪರಿಣಾಮ ಇಂದು ಸಂಕಷ್ಟಕ್ಕೆ ಸಿಲುಕಿರುವ ಈ ಕಾವಾಡಿಗನಿಗೆ ಮಾನವೀಯ ಸ್ಪಂದನ ತೀರಾ ಅತ್ಯವಶ್ಯಕವೆನಿಸಿದೆ. ಆತನ ಕುಟುಂಬಕ್ಕೆ ಅರಣ್ಯ ಇಲಾಖೆಯು ಆಸರೆ ನೀಡಬೇಕಿದೆ. ಕೇವಲ ಕಾನೂನಿನ ತಾಂತ್ರಿಕ ಲೋಪ ಹೇಳಿ ಅಮಾಯಕ ಕಾವಾಡಿಗನೊಂದಿಗೆ ಆತನ ಕುಟುಂಬಕ್ಕೆ ವೇತನ ನೀಡದೆ ಅಸಹಾಯಕ ಸ್ಥಿತಿಗೆ ತಳ್ಳಿರುವದು ದುರಂತ.

-ಶ್ರೀಸುತ