ಮಡಿಕೇರಿ, ಜು. 5: ಕಳೆದ ವರ್ಷ ಮಳೆಗಾಲದಲ್ಲಿ ಹಾನಿಗೊಂಡಿರುವ ಹೆದ್ದಾರಿ ನಿರ್ವಹಣೆಯನ್ನು ಸಮರ್ಪಕವಾಗಿ ನೋಡಿಕೊಳ್ಳದ ಪರಿಣಾಮ; ಪ್ರಸಕ್ತ ಮಳೆಯಲ್ಲಿ ಮಂಗಳೂರು ಹೆದ್ದಾರಿಯಲ್ಲಿ ಮತ್ತೆ ಬಿರುಕು ಕಾಣಿಸಿಕೊಳ್ಳುವಂತಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳೂರು ರಸ್ತೆಯನ್ನು ಖುದ್ದು ಪರಿಶೀಲಿಸಿದ ಅವರುಗಳು, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಎದುರಾಯಿತು.ಕಳೆದ ವರ್ಷ ಅಪಾಯ ಸಂಭವಿಸಿರುವ ಹೆದ್ದಾರಿಯ ಅಲ್ಲಲ್ಲಿ ದುರಸ್ತಿಗೊಳಿಸುವ ವೇಳೆ ಕೇವಲ ಎಂ. ಸ್ಯಾಂಡ್ ಚೀಲಗಳನ್ನು ಇರಿಸಲಾಗಿದ್ದು, ಸುರಕ್ಷಾ ಗೋಡೆ ನಿರ್ಮಿಸಿಲ್ಲವೆಂದು ಶಾಸಕರು ಬೊಟ್ಟು ಮಾಡಿದರು. ಅಲ್ಲದೆ ಮಳೆ ನೀರು ರಸ್ತೆಯ ಅಕ್ಕಪಕ್ಕ ಸರಾಗವಾಗಿ ಹರಿಯುವ ದಿಸೆಯಲ್ಲಿ ಚರಂಡಿಗಳನ್ನು ಕಲ್ಪಿಸದೆ ಮತ್ತೆ ಅಪಾಯ ಎದುರಿಸುವಂತಾಗಿದೆ ಎಂದು ನೆನಪಿಸಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ವಿಭಾಗದ ಅಧಿಕಾರಿಗಳನ್ನು ಈ ವೇಳೆ ತರಾಟೆಗೆ ತೆಗೆದುಕೊಂಡ ಶಾಸಕದ್ವಯರು, ತಾಂತ್ರಿಕವಾಗಿ ಗುಣಮಟ್ಟ ಕಾಯ್ದುಕೊಂಡು ಕೆಲಸಗಳನ್ನು ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನೆನಪಿಸಿದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ಸಂಬಂಧಿಸಿದ ಇಂಜಿನಿಯರ್ಗಳು ಎಚ್ಚೆತ್ತುಕೊಂಡು ಮಳೆಯಿಂದ ಅನಾಹುತಗಳು ಸಂಭವಿಸಿ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ನಿಗಾ ವಹಿಸುವಂತೆ ತಿಳಿಹೇಳಿದರು.
(ಮೊದಲ ಪುಟದಿಂದ) ಹಿಂದಿನ ಸಾಲಿನ ಅಪಾಯದ ಅರಿವಿನೊಂದಿಗೆ ಭವಿಷ್ಯದಲ್ಲಿ ಮತ್ತೆ ಅಂತಹ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು. ಶಾಸಕದ್ವಯರ ಭೇಟಿ ಸಂದರ್ಭ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸಹಿತ ಇತರ ಜನಪ್ರತಿನಿಧಿಗಳು, ಅಧಿಕಾರಿಗಳು, ಪ್ರಮುಖರು ಹಾಜರಿದ್ದರು.
ಸ್ಥಳದಲ್ಲೇ ದುರಸ್ತಿ : ಮಂಗಳೂರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದನ್ನು; ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ನಿರ್ದೇಶನದಂತೆ; ಇಂದು ಸರಿಪಡಿಸಲಾಯಿತು. ಬಿರುಕುಗಳನ್ನು ಸಿಮೆಂಟ್ ಇತ್ಯಾದಿ ಬಳಸಿ ತ್ವರಿತವಾಗಿ ಸರಿಪಡಿಸಿದ್ದು, ನೀರಿನ ಹರಿಯುವಿಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
47 ಕೋಟಿ ರೂ. ಪ್ರಸ್ತಾವನೆ
ರಾಷ್ಟ್ರೀಯ ಹೆದ್ದಾರಿ 275 ರ ಕಾಟಕೇರಿ ಗ್ರಾಮದ ಬಳಿ ರಸ್ತೆಯಲ್ಲಿ ಸಣ್ಣದ್ದಾಗಿ ಬಿರುಕು ಕಾಣಿಸಿಕೊಂಡಿದ್ದನ್ನು ಸಿಮೆಂಟ್ ಸ್ಲರಿ ಹಾಕಿ ಮುಚ್ಚಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ರಾಘವನ್ ಮತ್ತು ಕಾರ್ಯಪಾಲಕ ಎಂಜಿನಿಯರ್ ಎಸ್.ಹೊಳ್ಳ ತಿಳಿಸಿದ್ದಾರೆ. ಅವರು ಸಣ್ಣ ಬಿರುಕು ಕಾಣಿಸಿಕೊಂಡಿದ್ದನ್ನು ಪರಿಶೀಲಿಸಿ ಮುಚ್ಚಲು ಕ್ರಮವಹಿಸಿದ್ದಾರೆ. ಹಾಗೆಯೇ ರಸ್ತೆಯ ಬದಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಶಾಶ್ವತ ಕಾಮಗಾರಿ ಕೈಗೊಳ್ಳಲು ಕೇಂದ್ರ ಭೂ ಸಾರಿಗೆ ಇಲಾಖೆಗೆ 47 ಕೋಟಿ ರೂ. ಅನುದಾನ ಬಿಡುಗಡೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.