ಶ್ರೀಮಂಗಲ, ಜು. 5: ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ಕಾಫಿ ಬೆಳೆಗಾರರ ಬ್ಯಾಂಕ್‍ನ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿರುವ ವಿಚಾರದಿಂದ ಸಣ್ಣ ಬೆಳೆಗಾರರಿಗೆ ಯಾವದೇ ಪ್ರಯೋಜನ ಆಗುವದಿಲ್ಲ. ಸಣ್ಣ ಬೆಳೆಗಾರರು ಬ್ಯಾಂಕ್‍ನಲ್ಲಿ ಹೊಂದಿರುವ ಎಲ್ಲ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಸಣ್ಣ ಬೆಳೆಗಾರರಿಗೆ ಸಹಕಾರ ಸಂಘದಲ್ಲಿ ರೂ.3ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಲಭ್ಯವಿದೆ. ಇದನ್ನು ಪ್ರತಿವರ್ಷ ಸಣ್ಣ ಬೆಳೆಗಾರರು ನವೀಕರಣ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಬಡ್ಡಿ ಮನ್ನಾದಿಂದ ಸಣ್ಣ ಬೆಳೆಗಾರರಿಗೆ ಯಾವದೇ ಪ್ರಯೋಜನ ಆಗುವದಿಲ್ಲ. ದೊಡ್ಡ ಬೆಳೆಗಾರರು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಬಡ್ಡಿ ಮನ್ನಾದಿಂದ ಪ್ರಯೋಜನ ವಾಗಲಿದೆ. ದೊಡ್ಡ ಬೆಳೆಗಾರರು ಹಾಗೂ ಕಾರ್ಪೊರೇಟ್ ಒಡೆತನದಲ್ಲಿರುವ ಕಾಫಿ ತೋಟದ ಮಾಲೀಕರಿಗೆ ಬಡ್ಡಿ ಮನ್ನಾದಿಂದ ದೊಡ್ಡ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.
ದೊಡ್ಡ ಬೆಳೆಗರರ ಬಡ್ಡಿ ಮನ್ನಾ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ ಸಣ್ಣ ಬೆಳೆಗಾರರ ತೋಟ, ಗದ್ದೆಗಳ ದಾಖಲಾತಿಗಳನ್ನು ನೀಡಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿದ್ದು, ಈ ಸಾಲ ಸಂಪೂರ್ಣ ಮನ್ನಾವಾದರೆ ಮಾತ್ರ ಹೊಸ ಸಾಲ ದೊರೆಯಲಿದೆ. ಇದರಿಂದ ಮಾತ್ರ ಸಣ್ಣ ಬೆಳೆಗಾರರು ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ. ಕೇಂದ್ರ ಸರಕಾರ ದೊಡ್ಡ ಬೆಳೆಗಾರರ ಲಾಬಿಗೆ ಮಣಿಯದೆ ಸಣ್ಣ ಬೆಳೆಗಾರರ ಹಿತ ಕಾಪಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.