ಮಡಿಕೇರಿ, ಜು. 5: ಏಳನೆಯ ಆರ್ಥಿಕ ಗಣತಿಯನ್ನು ತ್ವರಿತವಾಗಿ ಆರಂಭಿಸುವದರ ಜೊತೆಗೆ ನಿಖರ ಮಾಹಿತಿ ಸಂಗ್ರಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಿವಿಮಾತು ಹೇಳಿದ್ದಾರೆ. 7ನೇ ಆರ್ಥಿಕ ಗಣತಿ ನಡೆಸುವ ಸಂಬಂಧ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕ ಗಣತಿ ಕಾರ್ಯವನ್ನು ಸರ್ಕಾರದ ನಿರ್ದೇಶನದಂತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಗಣತಿ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಕಂದಾಯ, ಪಂಚಾಯತ್ ರಾಜ್, ಕೃಷಿ, ಸಾರ್ವಜನಿಕ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಪಡೆಯುವಂತಾಗಬೇಕು. ಅಗತ್ಯ ಗಣತಿದಾರರನ್ನು ನಿಯೋಜಿಸಿಕೊಂಡು ನಿಖರ ಮಾಹಿತಿ ಸಂಗ್ರಹಿಸುವಂತೆ ಅನೀಸ್ ಕಣ್ಮಣಿ ಜಾಯ್ ಸಲಹೆ ಮಾಡಿದರು.
ಗಣತಿಗಾಗಿ ಅಗತ್ಯ ಸಿಬ್ಬಂದಿ ನೇಮಿಸಿ, ತರಬೇತಿ ನೀಡಿ ಜಿಲ್ಲೆಯಲ್ಲಿ ಯಾವುದೇ ಕಟ್ಟಡ/ ಉದ್ದಿಮೆ ಬಿಟ್ಟು ಹೋಗದಂತೆ ನಿಖರವಾಗಿ ಗಣತಿ ಕಾರ್ಯವನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಸಕಾಲದಲ್ಲಿ ಕೈಗೊಳ್ಳಲು ಸೂಚನೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ. ರಮೇಶ್ ಏಳನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯಾಚರಣೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿ ತಯಾರಿಸುವದು ಗಣತಿಯ ಮುಖ್ಯ ಉದ್ದೇಶವಾಗಿದೆ ಎಂದರು.
7ನೇ ಆರ್ಥಿಕ ಗಣತಿ 3 ತಿಂಗಳುಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್ ಮಾಹೆಯಲ್ಲಿ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಏಳನೇ ಆರ್ಥಿಕ ಗಣತಿಯನ್ನು ಜಿಲ್ಲೆಯಲ್ಲಿ 2ನೇ ಅಥವಾ 3ನೇ ವಾರದಲ್ಲಿ ಆರಂಭಿಸಲಾಗುತ್ತದೆ. ಗಣತಿ ಕಾರ್ಯದಲ್ಲಿ ಸುಮಾರು 56 ಮಂದಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರಸ್ತುತ ಗಣತಿಯು 7ನೇ ಆರ್ಥಿಕ ಗಣತಿಯಾಗಿದ್ದು, ಪ್ರತಿ 5 ವರ್ಷಗಳಿಗೊಮ್ಮೆ ಆರ್ಥಿಕ ಗಣತಿ ನಡೆಸಲಾಗುತ್ತಿದೆ. ಈ ಹಿಂದಿನ ಗಣತಿಗಳನ್ನು ಸರ್ಕಾರಿ/ ಅರೆ ಸರ್ಕಾರಿ ಸಿಬ್ಬಂದಿಯವರಿಂದ ನಡೆಸಲಾಗಿದ್ದು, 2014 ರಲ್ಲಿ ನಡೆದ 6ನೇ ಆರ್ಥಿಕ ಗಣತಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 12,627 ಉದ್ದಿಮೆ ಗುರುತಿಸ ಲಾಗಿದೆ. 7 ನೇ ಆರ್ಥಿಕ ಗಣತಿಯಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಆಪ್ ಮೂಲಕ ಖಾಸಗಿ ಸಿಬ್ಬಂದಿ ಯಿಂದ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ಪ್ಲಾಂಟೇಷನ್ ಬೆಳೆ ಸೇರಿದಂತೆ, ಋತುಕಾಲಿಕ, ವಾರ್ಷಿಕ/ ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಇಲಾಖೆಗಳ ಆಡಳಿತ ಕಚೇರಿ, ರಕ್ಷಣಾ ಮಂತ್ರಾಲಯದ ಕಚೇರಿ, ಸ್ಥಳೀಯ ಸಂಸ್ಥೆಗಳ ಆಡಳಿತ ಕಚೇರಿ ಮತ್ತಿತರ ಹಾಗೂ ಸರ್ಕಾರದಿಂದ ಕಾನೂನು ಬಾಹಿರ ಎಂದು ಘೋಷಿಸಲ್ಪಟ್ಟ ಮತ್ತು ಪಂದ್ಯ ಕಟ್ಟುವ ಚಟುವಟಿಕೆಗಳಲ್ಲಿ ತೊಡಗಿರುವ ಉದ್ದಿಮೆಗಳನ್ನು ಗಣತಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಅವರು ತಿಳಿಸಿದರು.
ಉದ್ದಿಮೆಗಳನ್ನು ಗಣತಿ ಮಾಡು ವಾಗ ಕಟ್ಟಡಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾಯ ಸ್ಥಳದಲ್ಲಿಯೇ ಗಣತಿ ಮಾಡಲಾಗು ವದು. ರಸ್ತೆ ಬದಿಯಲ್ಲಿ, ಬೀದಿಗಳಲ್ಲಿ, ಬಯಲು ಪ್ರದೇಶದಲ್ಲಿ ಕಟ್ಟಡವಲ್ಲದ ಪ್ರದೇಶಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾಯ ಉದ್ದಿಮೆ ಯ ಮಾಲೀಕರ ಮನೆಯಲ್ಲಿಯೇ ಗಣತಿ ಮಾಡಲಾಗುವದು. ಗಣತಿ ದಾರರು ಮನೆಗಳಿಗೆ/ ಉದ್ದಿಮೆಗಳಿಗೆ ಭೇಟಿ ನೀಡಿದಾಗ ಉದ್ದಿಮೆಯ ಮಾಲೀಕರು ಹಾಗೂ ಸಾರ್ವಜನಿಕರು ಅಗತ್ಯವಾದ ಎಲ್ಲಾ ವಿವರಗಳನ್ನು ಒದಗಿಸಬೇಕು ಎಂದರು.
ರಾಷ್ಟ್ರೀಯ ಸಾಂಖ್ಯಿಕ ಇಲಾಖೆಯ ಅಧಿಕಾರಿ ವಿವೇಕಾನಂದ ಶೆಣೈ, ಸಾಮಾನ್ಯ ಗಣತಿ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಮಹೇಶ್, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ರವೀಂದ್ರ, ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ ರಮೇಶ್, ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಪೌರಾಯುಕ್ತ ಎಂ.ಎಲ್. ರಮೇಶ್, ತಾ.ಪಂ. ಇಒ ಸುನಿಲ್‍ಕುಮಾರ್, ಸಹಾಯಕ ನಿರ್ದೇಶಕ ಜೀವನ್‍ಕುಮಾರ್, ಶಿರಸ್ತೆದಾರ ಪ್ರವೀಣ್‍ಕುಮಾರ್, ಶಿಕ್ಷಣ ಅಧಿಕಾರಿ ಕಾಶೀನಾಥ್, ವಿವಿದ ಇಲಾಖೆ ಅಧಿಕಾರಿಗಳು ಇದ್ದರು.