ವೀರಾಜಪೇಟೆ, ಜು. 5: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆಗೆ ಬದ್ಧವಾಗಿರುವ ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸಲು ತನ್ನ ಸೇವೆಯನ್ನು ಮುಡುಪಾಗಿರಿಸಿದೆ. ಲಯನ್ಸ್ ಸಂಸ್ಥೆಯಲ್ಲಿ ಸದಸ್ಯರು ಶಿಸ್ತು, ದಕ್ಷತೆ, ಪ್ರಾಮಾಣಿಕತೆಯೊಂದಿಗೆ ನಾಯಕತ್ವದ ಗುಣಗಳ ಅರ್ಹತೆಯನ್ನು ಪಡೆಯುತ್ತಾರೆ ಎಂದು ಲಯನ್ಸ್ ಗವರ್ನರ್ ಪಿ.ಡಿ.ಜಿ ಲ:ಗವರ್ನರ್ ಸಿ.ಎ.ಮುತ್ತಣ್ಣ ಹೇಳಿದರು.

ವೀರಾಜಪೇಟೆ ಲಯನ್ಸ್ ಕ್ಲಬ್‍ನಿಂದ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೂತನ ಸಾಲಿನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುತ್ತಣ್ಣ ಅವರು ಲಯನ್ಸ್ ಸಂಸ್ಥೆಗಳು ಸಮಾಜ ಸೇವೆಗೆ ಸಂಬಂಧಿಸಿದಂತೆ ಒಂದು ಯೋಜನೆಯನ್ನು ಕೈಗೊಂಡರೆ ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿರುತ್ತದೆ. ನಿಷ್ಪಕ್ಷಪಾತ ಸಮಾಜ ಸೇವೆ ಸಂಸ್ಥೆಯ ಮುಖ್ಯ. ಲಯನ್ಸ್ ಸಂಸ್ಥೆ ನಿರ್ಗತಿಕರು, ಬಡವರು, ಅಸಹಾಯಕರಿಗೆ ಬೇಧಭಾವವಿಲ್ಲದೆ ಸೇವೆಯನ್ನು ಸಲ್ಲಿಸುತ್ತಿದ್ದು ಇಂದಿನ ಸಮಾಜದ ಸಮಸ್ಯೆಗಳಿಗೆ ಲಯನ್ಸ್ ಸ್ಪಂದಿಸುತ್ತದೆ. ಸಂಸ್ಥೆಯ ಎಲ್ಲ ಸದಸ್ಯರು ಸಮಾಜ ಸೇವೆಗೆ ಬದ್ಧರಾಗಿರಬೇಕು ಎಂದರು.

ಸಮಾರಂಭದಲ್ಲಿ ಮುತ್ತಣ್ಣ ಅವರು ನೂತನ ಆಡಳಿತ ಮಂಡಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು. ಸಮಾರಂಭ ವನ್ನುದ್ದೇಶಿಸಿ ನಿಕಟ ಪೂರ್ವ ಅಧ್ಯಕ್ಷ ಬಿ.ಯು. ತ್ರಿಶುಲ್ ಗಣಪತಿ, ಪ್ರಸಕ್ತ ಸಾಲಿನ ನೂತನ ಅಧ್ಯಕ್ಷ ಪೌಲ್ ಕ್ಷೇವಿಯರ್ ಮಾತನಾಡಿದರು. ಮಂಗಳೂರು ಲಯನ್ಸ್ ಕ್ಲಬ್‍ನ ಗೋವರ್ಧನ್ ಶೆಟ್ಟಿ, ಸಂಜೀವ್ ಅತಿಥಿಗಳಾಗಿ ಭಾಗವಹಿಸಿದ್ದರು.

ಮೊದಲು ಪೌಲ್ ಕ್ಷೇವಿಯರ್, ಲಯನೆಸ್ ಸೋನಿ ದೀಪ ಬೆಳಗಿಸಿ ನೂತನ ಆಡಳಿತ ಮಂಡಳಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದಿನ ಸಾಲಿನ ಕಾರ್ಯದರ್ಶಿ ಪಿ.ಜಿ.ಪ್ರಧಾನ್ ತಮ್ಮಯ್ಯ, ಖಜಾಂಚಿ ಕೆ.ಪಿ.ನಿಯಾಜ್, ಪ್ರಸ್ತುತ ಸಾಲಿನ ಕಾರ್ಯದರ್ಶಿ ಎ.ಎ.ಅಜಿತ್, ಎಂ.ಎಂ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ವೀರಾಜಪೇಟೆ ಲಯನ್ಸ್ ಕ್ಲಬ್‍ನ ಸಂಸ್ಥಾಪಕ ಅಧ್ಯಕ್ಷ ಸಿ.ಎಚ್.ಕರುಣಾಕರನ್ ಅವರ ನಿಧನಕ್ಕೆ ಸಭೆ ಸಂತಾಪ ಸೂಚಿಸಿತು.

ಸಮಾರಂಭಕ್ಕೆ ಮಂಗಳೂರು, ಸಕಲೇಶಪುರ, ಸುಂಟಿಕೊಪ್ಪ, ಮಡಿಕೇರಿ, ಮೂರ್ನಾಡು, ಗೋಣಿಕೊಪ್ಪ ವಿವಿಧೆಡೆಗಳಿಂದ ಲಯನ್ಸ್ ಕ್ಲಬ್‍ನ ಪ್ರತಿನಿಧಿಗಳು ಆಗಮಿಸಿದ್ದರು.