ಪೊನ್ನಂಪೇಟೆ, ಜು. 5: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.)ನ 40ನೇ ವರ್ಷಾ ಚರಣೆಯ ಸಮಾರೋಪ ಸಮಾರಂಭವನ್ನು ತಾ.7 ರಂದು ವೀರಾಜಪೇಟೆಯಲ್ಲಿ ಅಯೋಜಿಸ ಲಾಗಿದೆ. ಈ ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರೊಂದಿಗೆ ಕೆ.ಎಂ.ಎ. ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿ (ಕೆ.ಎಂ.ಇ.ಎಫ್.) ಯ ಸಹಯೋಗದಲ್ಲಿ ಪ್ರತಿ ವರ್ಷ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗಾಗಿ ನಡೆಯುವ ‘ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2019’ ವಿತರಣೆ ಮತ್ತು 40ನೇ ವರ್ಷಾಚರಣೆಯ ಅಂಗವಾಗಿ ಜನಾಂಗದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವೂ ಜರುಗಲಿದೆ ಎಂದು ಹೇಳಿದರು.

ಅಂದು ಬೆಳಿಗ್ಗೆ 10.30 ರಿಂದ ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಉದ್ಘಾಟಿ ಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ, ಕರ್ನಾಟಕ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಸೈಯದ್ ಮೋಹಿದ್ ಅಲ್ತಾಫ್, ಮಾಜಿ ಎಂ.ಎಲ್.ಸಿ. ಚೆಪ್ಪುಡೀರ ಅರುಣ್ ಮಾಚಯ್ಯ, ಕೊಡವ ಮುಸ್ಲಿಂ ಅಸೋಸಿಯೇಷನ್‍ನ ಸ್ಥಾಪಕಾಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ ಪಾಲ್ಗೊಳ್ಳಲಿದ್ದಾರೆ. ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಜನಾಂಗದ ಪ್ರಥಮ ಮಹಿಳಾ ಪಿ.ಹೆಚ್.ಡಿ. ಪದವೀಧರೆ ಮತ್ತು ಇದೀಗ ಮಂಡ್ಯದ ವಿ.ಸಿ. ಫಾರಂನ ಕೃಷಿ ಮಹಾವಿದ್ಯಾಲಯದಲ್ಲಿ ಬೇಸಾಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕಿ ಡಾ. ಪುಡಿಯಂಡ ಎಸ್. ಫಾತೀಮ, ಕೊಡಗು ಜಿಲ್ಲಾ ಖಜಾನಾಧಿಕಾರಿಗಳಾಗಿ ನಿವೃತ್ತರಾದ ವೀರಾಜಪೇಟೆ ಸಮೀಪದ ನಲ್ವತೋಕ್ಲುವಿನ ದುದ್ದಿಯಂಡ ಎಂ.ಉಸ್ಮಾನ್ ಹಾಜಿ ಮತ್ತು ಕನ್ನಡಿಯಂಡ ಎ.ಆಲಿ ಹಾಜಿ ಅವರುಗಳನ್ನು ಸನ್ಮಾನಿಸಲಾಗುವದು. ವಿಜ್ಞಾನ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ದುದ್ದಿಯಂಡ ಎಂ. ಮೊಹಮ್ಮದ್ ಝಿಯಾನ್ ಮತ್ತು ಕಿರಿಯ ವಯಸ್ಸಿನಲ್ಲೇ ಕರಾಟೆಯಲ್ಲಿ ಸಾಧನೆಗೈದ ಬೆಂಗಳೂರಿನ ಜಯನಗರ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ದುದ್ದಿಯಂಡ ಹೆಚ್. ಉವೈಸ್ ಅವರನ್ನು ‘ಯುವ ಸಾಧಕ’ರೆಂದು ಗುರುತಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವದು ಎಂದು ಡಿ.ಹೆಚ್. ಸೂಫಿ ಹೇಳಿದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ ಮಾತನಾಡಿ, ಕಾರ್ಯಕ್ರಮದಲ್ಲಿ ಕಳೆದ ದ್ವಿತೀಯ ಪಿ.ಯು.ಸಿ., ಎಸ್.ಎಸ್. ಎಲ್.ಸಿ. ಹಾಗೂ ಮದರಸಾ ವಿಭಾಗದ 5ನೇ, 7ನೇ ಮತ್ತು 10ನೇ ತರಗತಿಯ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿರುವ ಜನಾಂಗದ ಒಟ್ಟು 35 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಪಾರಿತೋಷಕ ಮತ್ತು ನಗದು ಬಹುಮಾನಗಳನ್ನು ನೀಡಿ ಅವರನ್ನು ಶೈಕ್ಷಣಿಕವಾಗಿ ಉತ್ತೇಜಿಸಲಾಗುವದು ಎಂದು ಹೇಳಿದರಲ್ಲದೆ, ಕೆ.ಎಂ.ಎ. ವತಿಯಿಂದ ಜರುಗುವ ಪ್ರತಿಭಾ ಪುರಸ್ಕಾರ ವಿತರಣೆ ಎಂಬ ವಾರ್ಷಿಕ ಕಾರ್ಯಕ್ರಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಜನಾಂಗದವರನ್ನು ಪ್ರತಿ ವರ್ಷ ಒಂದೆಡೆ ಸೇರಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಚಿಮ್ಮಿಚ್ಚೀರ ಕೆ. ಇಬ್ರಾಹಿಂ(ಉಮ್ಣಿ), ಕರ್ತೊರೆರ ಕೆ. ಮುಸ್ತಫಾ ಮತ್ತು ಪೊಯಕೆರ ಎಸ್. ಮೊಹಮ್ಮದ್ ರಫೀಕ್ ಅವರು ಉಪಸ್ಥಿತರಿದ್ದರು.