ಶನಿವಾರಸಂತೆ, ಜು. 4: ಸಮಾಜ ರೋಟರಿ ಸಂಸ್ಥೆಯ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದು, ಅದನ್ನು ಸ್ನೇಹದ ಸಂಕೇತವಾದ ರೋಟರಿ ಸಂಸ್ಥೆಗಳ ಸದಸ್ಯರು ಹುಸಿಗೊಳಿಸಬಾರದು. ಸದಸ್ಯರಿಗೆ ಸಹಿಷ್ಣುತಾ ಮನೋಭಾವ ಮುಖ್ಯ ಎಂದು ರೋಟರಿ ಜಿಲ್ಲಾ ಹಿಂದಿನ ಸಾಲಿನ ರಾಜ್ಯಪಾಲ ರೋಹಿನಾಥ್ ಅಭಿಪ್ರಾಯಪಟ್ಟರು. ಸಮೀಪದ ಆಲೂರು-ಸಿದ್ದಾಪುರದಲ್ಲಿ ನೂತನವಾಗಿ ರಚನೆಯಾದ ಮಲ್ಲೇಶ್ವರ ಆಲೂರು-ಸಿದ್ದಾಪುರ ರೋಟರಿ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಸದಸ್ಯರು ಸೇವೆಗೆ ಪ್ರಾಮುಖ್ಯತೆ ನೀಡಿ ಸಮಾಜಕ್ಕೆ ಕೊಡುಗೆ ನೀಡಬೇಕಿದೆ. ಸಮಾಜ ಸೇವೆಯೇ ಧ್ಯೇಯವಾಗಬೇಕು ಕೊಡಗಿನಲ್ಲಿ ಜಲಪ್ರಳಯದಿಂದ ಸಂತ್ರಸ್ತರಾದವರ ಬಗ್ಗೆ ಸ್ಪಂದಿಸಿ ರೋಟರಿ ರೂ. 1.25 ಕೋಟಿ ವೆಚ್ಚದಲ್ಲಿ 25 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಈ ಮನೆ ನಿರ್ಮಾಣಕ್ಕೆ ಜಗತ್ತಿನೆಲ್ಲೆಡೆಯಿಂದ ರೂ. 1.75 ಕೋಟಿ ಲಭಿಸಿದ್ದು, ಉಳಿದ ಹಣದಲ್ಲೂ ಮತ್ತಷ್ಟು ಮನೆಗಳ ನಿರ್ಮಾಣ ಕಾರ್ಯಕೈಗೊಳ್ಳುತ್ತೇವೆ.
ಕಾಯಕಲ್ಪ ಯೋಜನೆಯಡಿ 4 ಕಂದಾಯ ಜಿಲ್ಲೆಗಳಲ್ಲಿ 525 ಅಂಗನವಾಡಿಗಳು ಕಾಯಕಲ್ಪ ಪಡೆದಿವೆ. ಈ ಯೋಜನೆ ಮೆಚ್ಚಿದ ಕೇಂದ್ರ ಸರ್ಕಾರ ಇದೀಗ ಪರಿಸರ ತಜ್ಞ ಕಸ್ತೂರಿ ರಂಗನ್ ನೇತೃತ್ವದಲ್ಲಿ ಅಂಗನವಾಡಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದೆ.
ರೋಟರಿ ಕಾರ್ಯ ಯೋಜನೆಗಳು ಅತ್ಯಂತ ಪಾರದರ್ಶಕವಾಗಿರಬೇಕು ಎಂದು ರೋಹಿನಾಥ್ ಹೇಳಿದರು.
ರೋಟರಿ ವಲಯ ಸಹಾಯಕ ರಾಜ್ಯಪಾಲ ಪಿ. ನಾಗೇಶ್ ಮಾತನಾಡಿ, ಸಮಾಜ ಸೇವೆಯ ಮೂಲಕ ರೋಟರಿ ತನ್ನ ಮೂಲ ಉದ್ದೇಶದ ಗುರಿ ಸಾಧಿಸಬೇಕು. ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇನ್ನು ಕೆಲವೇ ತಿಂಗಳಲ್ಲಿ ಪೋಲಿಯೋ ವಿಶ್ವದಿಂದಲೇ ನಿವಾರಣೆಯಾಗಲಿದೆ ಎಂದರು.
ರೋಟರಿ ಜಿಲ್ಲೆಯ ಸದಸ್ಯತ್ವ ನೋಂದಣಿ ಸಮಿತಿಯ ಮಾಜಿ ಜಿಲ್ಲಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ರೋಟರಿ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 14 ಹೊಸ ಸಂಸ್ಥೆಗಳ ರಚನೆಯೊಂದಿಗೆ 825 ಸದಸ್ಯರನ್ನು ಸೇರ್ಪಡೆಗೊಳಿಸಿ ಜಾಗತಿಕ ದಾಖಲೆ ಮಾಡಲಾಗಿದೆ ಎಂದರು. ರೋಟರಿ ವಲಯ ಕಾರ್ಯದರ್ಶಿ ಹೆಚ್.ಟಿ. ಅನಿಲ್, ಸೇನಾನಿ ಹೆಚ್.ಎಸ್. ವಸಂತ್ ಕುಮಾರ್, ಸೋಮವಾರಪೇಟೆ ರೋಟರಿ ಹಿಲ್ಸ್ ನೂತನ ಅಧ್ಯಕ್ಷ ಡಿ.ಪಿ. ರಮೇಶ್, ಕಾರ್ಯದರ್ಶಿ ಹೆಚ್.ಸಿ. ಲೋಕೇಶ್, ಮಾಜಿ ಅಧ್ಯಕ್ಷ ಪಿ.ಕೆ. ರವಿ, ಮಾಜಿ ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್, ಜಿಲ್ಲೆಯ ಸದಸ್ಯತ್ವ ನೋಂದಣಿ ಸಮಿತಿಯ ನೂತನ ಜಿಲ್ಲಾ ಅಧ್ಯಕ್ಷ ಕ್ರೆಜ್ವಲ್ ಕೋಟ್ಸ್ ಮಾತನಾಡಿದರು.
ಈ ಸಂದರ್ಭ ನೂತನವಾಗಿ ರಚನೆಯಾದ ಮಲ್ಲೇಶ್ವರ ಆಲೂರು ಸಿದ್ದಾಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಹೆಚ್.ಈ. ತಮ್ಮಯ್ಯ, ಕಾರ್ಯದರ್ಶಿಯಾಗಿ ಹೆಚ್.ಈ. ಸಂಪತ್ ಹಾಗೂ 26 ಮಂದಿ ನೂತನ ಸದಸ್ಯರ ಪದಗ್ರಹಣವಾಗಿ ಪ್ರಮಾಣ ವಚನ ಸ್ವೀಕರಿಸಿದರು.