ಮಡಿಕೇರಿ, ಜು. 4: ಆನೆ ಮಾನವ ಸಂಘರ್ಷ ಪೀಡಿತ ಗ್ರಾಮಗಳಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದಲ್ಲಿ ಮೂರು ಕಾಡಾನೆಗಳು ಗುರುವಾರದಂದು ತೋಟದ ಒಳಗಿನಿಂದ ರಸ್ತೆಗೆ ಬಂದು ಅತ್ತಿಂದಿತ್ತ ಓಡಾಡಿದ ಪರಿಣಾಮ, ಶಾಲೆಗೆ ಹೋಗುವ ಮಕ್ಕಳು, ವಾಹನ ಸವಾರರು ಮತ್ತು ಸಾರ್ವಜನಿಕರು ಭಯ ಭೀತರಾದರು.

ಗುರುವಾರದಂದು ಬೆಳಿಗ್ಗೆ 7.30ರ ಸುಮಾರಿಗೆ ಕೊಡಗರಹಳ್ಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಮೂರು ಕಾಡಾನೆಗಳು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಸ್ವಚ್ಛಂದವಾಗಿ ವಿಹರಿಸಿ, ತೋಟದತ್ತ ಸಾಗುತ್ತಿದ್ದ ಮಾಲೀಕರು ಮತ್ತು ಕಾರ್ಮಿಕರ ಕಣ್ಣಿಗೆ ಬಿದ್ದಿವೆ, ನಾಯಿಗಳ ಬೊಗಳುವಿಕೆ, ಜನರ ಕೂಗಾಟ ಮತ್ತು ಪಟಾಕಿ ಸದ್ದಿನಿಂದ ಬೆದರಿದ ಆನೆಗಳು ಏಕಾಏಕಿ ರಸ್ತೆಗೆ ಬಂದುಬಿಟ್ಟ ಪರಿಣಾಮ, ಜನರು ಚೆಲ್ಲಾಪಿಲ್ಲಿಯಾದರು.

ಗ್ರಾಮಸ್ಥರು ಸೇರಿಕೊಂಡು ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಕೂq,À ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಆನೆಗಳು ಓಡಿದವೇ ಹೊರತು, ತಾವು ಬಂದ ದಾರಿಗಾಗಿ ಚಿಕ್ಲಿ ಹೊಳೆ ಇಲ್ಲವೆ ಅರಣ್ಯ ಪ್ರದೇಶವನ್ನು ಸೇರುವ ಪ್ರಯತ್ನ ಮಾಡಲಿಲ್ಲ. ಸಾಮಾನ್ಯವಾಗಿ ಕಾಡಾನೆಗಳು ಈ ವ್ಯಾಪ್ತಿಯಲ್ಲಿ 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ ನಾಕೂರು ಶಿರಂಗಾಲ, ಅಂದಗೋವೆ ವ್ಯಾಪ್ತಿಯಲ್ಲಿ ತಡ ರಾತ್ರಿಯಿಂದ ಬೆಳಗ್ಗಿನಜಾವ ಅಡ್ಡಾಡಿ ತಮ್ಮ ತಂಗುದಾಣಗಳಿಗೆ ಹೋಗಿರುತ್ತಿದ್ದವು. ಆದರೆ, ಗುರುವಾರದಂದು ಪ್ರಥಮಬಾರಿ ಹಗಲಿನ ಹೊತ್ತು ತೋಟಗಳಲ್ಲಿ ಉಳಿದುಕೊಂಡಿವೆ. ಬೇಸಿಗೆಯ ಸಮಯವಾಗಿದ್ದಲ್ಲಿ ತೋಟಗಳಿಗೆ ನೀರು ಹಾಯಿಸುವ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಬೆಳಗ್ಗಿನ ಸಮಯವೇ ಮಾಲೀಕರು ಮತ್ತು ಕಾರ್ಮಿಕರು ಹೋಗಿರುತ್ತಿದ್ದರು. ಕಾರ್ಮಿಕರು ಕೆಲಸಕ್ಕೆ ಬರುವ ವೇಳೆ ಶಾಲಾ ಮಕ್ಕಳು ಮತ್ತು ಇತರರು ತಮ್ಮ ಕೆಲಸದ ಸ್ಥಳಗಳತ್ತ ಹೋಗಬೇಕಾದ ಸಂದರ್ಭ, ಆನೆಗಳು ಪ್ರತ್ಯಕ್ಷವಾಗುವ ಭಯ ಕಾಡಿದೆ. ಇದೀಗ ಇಳಿ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಮನೆ ಸೇರಬೇಕಾದವರು ಏನು ಮಾಡುವದು ಎಂದು ಚಿಂತೆಗೀಡಾಗಿದ್ದಾರೆ.

ಕುಶಾಲನಗರ ವಲಯದ ಉಪ ವಲಯ ಅರಣ್ಯಾಧಿಕಾರಿ ರಂಜನ್ ನೇತೃತ್ವದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಆನೆಗಳನ್ನು ಓಡಿಸುವ ಕೆಲಸವನ್ನು ಮಾಡಿದೆ. ಮಳೆಯ ಪ್ರಮಾಣ ಹೆಚ್ಚಿದ್ದ ಹಿನ್ನೆಲೆಯಲ್ಲಿ ಆನೆಗಳನ್ನು ಕಂಬಿಬಾಣೆ ಅತ್ತೂರು ನಲ್ಲೂರು ಟಾಟ ತೋಟದ ವ್ಯಾಪ್ತಿಯನ್ನು ದಾಟಿಸಿ, ಚಿಕ್ಲಿಹೊಳೆ ಹಿನ್ನೀರಿನ ಪ್ರದೇಶಕ್ಕೆ ಅಟ್ಟಿಸಲಾಗಿದೆ ಎಂದು ರಂಜನ್ ಮಾಹಿತಿ ನೀಡಿದ್ದು, ಗ್ರಾಮಸ್ಥರು ಬೆಳಗ್ಗಿನ ಹೊತ್ತು ಮತ್ತು ಸಂಜೆಯ ಸಮಯಗಳಲ್ಲಿ ತೋಟ ಗದ್ದೆಗಳತ್ತ ತೆರಳುವ ಸಂದರ್ಭ, ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ತೋಟ, ಗದ್ದೆ ಮತ್ತು ಕೃಷಿ ಫಸಲಿಗೆ ಸೀಮಿತವಾಗಿದ್ದು ಇದೀಗ ನಾಯಿ, ಮನುಷ್ಯರು ಹಾಗೂ ಪಟಾಕಿಯ ಭಯವನ್ನು ಮೀರಿ, ಆನೆಗಳು ರಸ್ತೆಗೆ ಬಂದು ಹಗಲಿನ ವೇಳೆಯಲ್ಲಿ ಕೂಡ ತಾನು ನಡೆದದ್ದೇ ದಾರಿ ಎಂದು ಭಯ ಹುಟ್ಟಿಸಿದ್ದು ಸ್ಥಳೀಯರಿಗೆ ನುಂಗಲಾರದ ತುತ್ತಾಗಿದೆ. ಇದೀಗ ಅರಣ್ಯ ಇಲಾಖೆಯವರು ಹೆಚ್ಚಿನ ಜವಬ್ದಾರಿಯಿಂದ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಬೇಕೆಂದು ಜನತೆ ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.