ಮದೆ, ಜು. 4: ಕಳೆದ ವರ್ಷ ಅತಿವೃಷ್ಟಿ ಸಂದರ್ಭ ಭೂಕುಸಿತ ಕ್ಕೊಳಗಾಗಿ ಕೊಚ್ಚಿ ಹೋಗಿದ್ದ ಮಡಿಕೇರಿ - ಮಂಗಳೂರು ರಸ್ತೆಯ ಇನ್ನುಳಿದ ಭಾಗಗಳಲ್ಲಿ ಇದೀಗ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು, ರಸ್ತೆ ಮತ್ತೆ ಕುಸಿಯುವ ಹಂತದಲ್ಲಿದೆ.ಕಳೆದ ವರ್ಷದ ಪ್ರಕೃತಿ ವಿಕೋಪದಲ್ಲಿ ಮಡಿಕೇರಿ - ಮಂಗಳೂರು ಹೆದ್ದಾರಿ ಬಹುತೇಕ ಕೊಚ್ಚಿ ಹೋಗಿತ್ತು. ತದನಂತರದಲ್ಲಿ ಸರಕಾರದ ವತಿಯಿಂದ ಕುಸಿದ ಭಾಗಗಳಲ್ಲಿ ಮರಳು ಚೀಲಗಳನ್ನಿರಿಸಿ ತಾತ್ಕಾಲಿಕ (ಮೊದಲ ಪುಟದಿಂದ) ದುರಸ್ತಿ ಮಾಡಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಕೋಪ ಸಂಭವಿಸಿ ಒಂದು ವರ್ಷ ಆದರೂ ಶಾಶ್ವತ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲ. ಇದರ ಪರಿಣಾಮವಾಗಿ ಇದೀಗ ತಾತ್ಕಾಲಿಕ ಮರಳಿನ ಚೀಲ ಇರಿಸಿರುವ ಭಾಗಗಳಲ್ಲಿ ರಸ್ತೆಗಳೇ ಬಿರುಕು ಕಾಣಿಸಕೊಳ್ಳತೊಡಗಿದೆ.ಹೆದ್ದಾರಿಯ ಕಾವೇರಿ ಬಕ್ಕ ಜಂಕ್ಷನ್ ಹಾಗೂ ಕಾಟಕೇರಿ ನಡುವೆ ಕುಸಿದಿದ್ದ ರಸ್ತೆಗೆ ಮರಳು ಚೀಲಗಳಿಂದ ತಡೆಗೋಡೆ ನಿರ್ಮಿಸಲಾಗಿದೆ. ಈ ಮಾರ್ಗ ಅಷ್ಟೊಂದು ಸುರಕ್ಷಿತವಲ್ಲವಾದರೂ ವರ್ಷವಿಡೀ ಭಾರೀ ವಾಹನಗಳು ಸಂಚರಿಸಿದರ ಪರಿಣಾಮ ರಸ್ತೆ ತನ್ನ ಸಾಮಾಥ್ರ್ಯ ಕಳೆದುಕೊಂಡಿದೆ. ಇದೀಗ ಮಳೆಗಾಲ ಆರಂಭವಾಗಿದ್ದು, ನಿನ್ನೆಯಿಂದ ಮಳೆಯ ಪ್ರಮಾಣ ಕೊಂಚ ಹೆಚ್ಚಾಗಿದೆ. ಹಾಗಾಗಿ ಕಾಟಕೇರಿ ಬಳಿ ನಿನ್ನೆ ಸಂಜೆಯಿಂದ ರಸ್ತೆಯಲ್ಲಿ ಬಿರುಕು ಮೂಡಿದೆ. ಇಂದು ಬಿರುಕು ಹೆಚ್ಚಾಗಿದ್ದು, ಮಳೆ ನೀರು ಬಿರುಕಿನಲ್ಲಿ ಹರಿದು ರಸ್ತೆ ಮತ್ತೆ ಕುಸಿಯುವ ಹಂತದಲ್ಲಿದೆ. ಕೆಲವೊಂದು ಇಂತಹ ಅಪಾಯಕಾರಿ ಸ್ಥಳದಲ್ಲಿ ತಾತ್ಕಾಲಿಕ ವ್ಯವಸ್ಥೆ ಬದಲಿಗೆ ಶಾಶ್ವತ ಕಾಮಗಾರಿ ಮಾಡಬೇಕಿತ್ತು. ಒಂದು ವೇಳೆ ರಾತ್ರಿಯಲ್ಲಿ ದಿಢೀರ್ ರಸ್ತೆ ಕುಸಿದರೆ ಅಪಾಯ ತಪ್ಪಿದಲ್ಲ ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.
- ಜಿ.ಎ. ಇಬ್ರಾಹಿಂ