ಮಡಿಕೇರಿ, ಜು. 4: ದಕ್ಷಿಣ ಕೊಡಗಿನ ಬರಪೊಳೆ (ಕಕ್ಕಟ್ಟು ಹೊಳೆ)ಯಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸಲು ಜಿಲ್ಲಾಡಳಿತದಿಂದ ಅಲ್ಲಿಗೆ ಬೇಡಿಕೆ ಸಲ್ಲಿಸಿದ್ದ ನಾಲ್ಕು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದ್ದು, ಪ್ರಸ್ತುತ ಅಲ್ಲಿ ರ್ಯಾಫ್ಟಿಂಗ್ ಆರಂಭಗೊಂಡಿದೆ. ಇದಕ್ಕೆ ಪ್ರತಿಯೊಬ್ಬರಿಗೆ ರೂ. 600 ದರವನ್ನು ನಿಗದಿಪಡಿಸಲಾಗಿದ್ದು, ಈ ದರವನ್ನು ಮರುಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ಕೊಡಗು ವೈಟ್‍ವಾಟರ್ ರ್ಯಾಫ್ಟಿಂಗ್ ಸಂಸ್ಥೆಯ ಚೋನಿರ ರತನ್ ಅವರು ತಿಳಿಸಿದ್ದಾರೆ. ದುಬಾರೆಯಲ್ಲಿನ ರ್ಯಾಫ್ಟಿಂಗ್ ವಿಚಾರಕ್ಕೂ ಬರಪೊಳೆಗೂ ಹೋಲಿಕೆ ಮಾಡುವದು ಸರಿಯಲ್ಲ ಇವೆರಡು ಪ್ರದೇಶ ವಿಭಿನ್ನ ರೀತಿಯದ್ದಾಗಿದ್ದು, ಇದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಲಾಗುವದು. ಈಗಿನ ಜಿಲ್ಲಾಧಿಕಾರಿಗಳು ವಾಸ್ತವಾಂಶವನ್ನು ಅರಿತು ತಮ್ಮ ಬೇಡಿಕೆಗೆ ಮರು ಸ್ಪಂದಿಸುವ ವಿಶ್ವಾಸವಿರುವದಾಗಿ ಅವರು ತಿಳಿಸಿದ್ದಾರೆ.
ಸಮಸ್ಯೆ - ವಾಸ್ತವವೇನು..?
ಬರಪೊಳೆಯಲ್ಲಿ ರ್ಯಾಫ್ಟಿಂಗ್‍ಗೆ ಅಧಿಕೃತವಾಗಿ ಅನುಮತಿ ಪಡೆದಿರುವ ಕೊಡಗು ವೈಟ್‍ವಾಟರ್ ರ್ಯಾಫ್ಟಿಂಗ್ ಸಂಸ್ಥೆಯ ರತನ್ ಅವರ ಅಭಿಪ್ರಾಯದಂತೆ ದುಬಾರೆಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸವಿದೆ. ದುಬಾರೆಯಲ್ಲಿನ ರ್ಯಾಫ್ಟಿಂಗ್ ಬರಪೊಳೆಯಷ್ಟು ಕಠಿಣವಾದುದಲ್ಲ. ಅದು ಒಂದು ರೀತಿಯಲ್ಲಿ ಸ್ಟಿಲ್ ವಾಟರ್ ರ್ಯಾಫ್ಟಿಂಗ್ ಎನ್ನಬಹುದು. ದುಬಾರೆಯಲ್ಲಿ ರ್ಯಾಫ್ಟಿಂಗ್ ನಡೆಸುವದಕ್ಕಿಂತ ಇಲ್ಲಿ ಹೆಚ್ಚು ವೆಚ್ಚ ತಗಲುವದು ವಾಸ್ತವವಾಗಿದೆ. ದುಬಾರೆಯಲ್ಲಿ ಪರಿಣತರಿಗೆ ರೂ. ಏಳೆಂಟು ಸಾವಿರ ಸಂಬಳ ವಿದ್ದರೆ, ಬರಪೊಳೆಯಲ್ಲಿ ರ್ಯಾಫ್ಟಿಂಗ್ ಚಟುವಟಿಕೆ ನಿಭಾಯಿಸಲು ತರಬೇತಿ ಹೊಂದಿದವರಿಗೆ 25 ರಿಂದ 30 ಸಾವಿರದಷ್ಟು ಸಂಬಳವನ್ನು ತಿಂಗಳಿಗೆ ನೀಡಬೇಕಾಗುತ್ತದೆ. ಹೊಸ ರ್ಯಾಫ್ಟ್ ಖರೀದಿಸಲು ಬರಪೊಳೆಗೆ ಎರಡೂವರೆಯಿಂದ ಮೂರೂವರೆ ಲಕ್ಷದಷ್ಟು ವೆಚ್ಚ ತಗಲುತ್ತದೆ. ದುಬಾರೆಯಲ್ಲಿನ ರ್ಯಾಫ್ಟ್‍ಗಳಿಗೆ ಇಷ್ಟು ಹೊರೆಯಾಗುವದಿಲ್ಲ.
ಅಲ್ಲದೆ, ಇದು ದುರ್ಗಮ ಹಾದಿಯ ನಡುವಿನ ರ್ಯಾಫ್ಟಿಂಗ್ ಆದ ಕಾರಣ ರ್ಯಾಫ್ಟ್ ಕೂಡ ಆಗಿಂದಾಗ್ಗೆ ಪಂಚರ್ ಆಗುವದು ಸಾಮಾನ್ಯವಾಗಿದೆ; ದುಬಾರೆ ಪ್ರಸಿದ್ಧ ಪ್ರವಾಸಿ ತಾಣವಾಗಿರುವದರಿಂದ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ತಾವಾಗಿಯೇ ಆಗಮಿಸುತ್ತಾರೆ. ಆದರೆ ಬರಪೊಳೆಗೆ ಕೇವಲ ವಾರಾಂತ್ಯದಲ್ಲಿ ಮಾತ್ರ ರ್ಯಾಫ್ಟಿಂಗ್ ನಡೆಸುವವರು ಸಿಗುತ್ತಾರೆ. ಅದರಲ್ಲೂ ಇಲ್ಲಿನ ಪ್ರಚಾರ, ಜಾಹೀರಾತಿಗೆ ಅಧಿಕ ವೆಚ್ಚ ತಗುಲುತ್ತಿದ್ದು, ಇಲ್ಲಿನ ‘ಮಾರ್ಕೆಟಿಂಗ್’ ಕೂಡ ತ್ರಾಸದಾಯಕವಾದದ್ದು ಎಂದು ರತನ್ ವಾಸ್ತವಾಂಶವನ್ನು ‘ಶಕ್ತಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಬರಪೊಳೆಯಲ್ಲಿ ರ್ಯಾಫ್ಟಿಂಗ್ ನಡೆಸುವವರನ್ನು ಹಾದಿ ಮುಗಿಯುವ ಸ್ಥಳವಾದ ಟೀ ಎಸ್ಟೇಟ್‍ನಿಂದ ಮತ್ತೆ ಬೇರೆ ವಾಹನದಲ್ಲಿ ಕರೆತರಬೇಕಾಗುತ್ತದೆ. ಇಲ್ಲಿ ದಾರಿ ನಿರ್ಮಾಣಕ್ಕೂ ಸಂಸ್ಥೆಯವರಿಗೆ ಹೊರೆ ಬೀಳುತ್ತದೆ. ಇದರೊಂದಿಗೆ ರೂ. 108 ರಷ್ಟು ತೆರಿಗೆ ಹಾಗೂ ಆಗಮಿಸುವವರಿಗೆ ಶೌಚಾಲಯ, ಕಾಫಿ - ತಿಂಡಿಯ ರೂಪದಲ್ಲಿ ರೂ. 92 ರಷ್ಟು ಹಣ ಒಬ್ಬರಿಗೆ ವೆಚ್ಚವಾಗುತ್ತದೆ; ಮಾರ್ಕೆಟಿಂಗ್‍ಗಾಗಿ ಕಮೀಷನ್ ನೀಡಲೇಬೇಕಾದ ಪರಿಸ್ಥಿತಿಯೂ ಇರುವದರಿಂದ ಕೇವಲ ರೂ. 600ದರ ಸಾಕಾಗುವದಿಲ್ಲ ಎಂಬದು ವಾಸ್ತವಿಕವಾಗಿದ್ದು, ಈ ಎಲ್ಲಾ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಮನವರಿಕೆ ಮಾಡಲು ಪ್ರಯತ್ನಿಸಲಾಗುವದು ಎಂದಿದ್ದಾರೆ.
ರ್ಯಾಫ್ಟಿಂಗ್‍ಗೆ ಅನುಮತಿ ಪಡೆದಿರುವ ‘ಏಸ್ ಪ್ಯಾಡ್ಲರ್ಸ್’ ಸಂಸ್ಥೆಯ ಮಂಜುನಾಥ್ ಅವರು ಮಾಹಿತಿ ನೀಡಿ ಬರಪೊಳೆಯಲ್ಲಿ 2007ರಲ್ಲಿ ರ್ಯಾಫ್ಟಿಂಗ್ ಪ್ರಾರಂಭಿಸಲಾಗಿದ್ದು, ಆ ವರ್ಷ ರೂ. 1 ಸಾವಿರ, 2008ರಲ್ಲಿ ರೂ. 1200 ದರ ಇತ್ತು. ಆ ಬಳಿಕ ಪೆಟ್ರೋಲ್ - ಡೀಸಲ್ ದರ ಏರಿಕೆ ಸೇರಿದಂತೆ ಹಲವು ಬದಲಾವಣೆ ಗಳಾಗಿದ್ದರೂ ಇದೇ ದರ ಮುಂದುವರಿದಿತ್ತು. ಈ ಬಾರಿ ನಿರ್ವಹಣಾ ಸಮಿತಿ ಮಾಡಲಾಗಿದ್ದು, ಇಲ್ಲಿ ಬರಪೊಳೆ ರ್ಯಾಫ್ಟಿಂಗ್‍ನವರಿಗೆ ಪ್ರಾತಿನಿದ್ಯಕ್ಕೆ ಕಾರಣಾಂತರಗಳಿಂದ ಅವಕಾಶವಿರಲಿಲ್ಲ ಎಂದರು.
ದುಬಾರೆಯಲ್ಲಿ ಹಿಂದಿನಿಂದಲೂ ಕಡಿಮೆ ದರವಿದ್ದು, ಇದೇ ದರವನ್ನು ಎರಡೂ ಕಡೆಗೆ ಸಾಮಾನ್ಯವಾಗಿ ಜಾರಿಗೊಳಿಸಲಾಗಿದೆ. ಆದರೆ ಬರಪೊಳೆಯಲ್ಲಿ ನಿರ್ವಹಣಾ ವೆಚ್ಚ ಬಹಳಷ್ಟು ಹೆಚ್ಚಿದೆ. ಮಾತ್ರವಲ್ಲದೆ ಇಲ್ಲಿ ಸಿಗುವದು ಕೇವಲ ಮೂರು ತಿಂಗಳ ಅವಕಾಶ ಮಾತ್ರವಾಗಿದೆ. ದುಬಾರೆ ಯಲ್ಲಿ ವರ್ಷಪೂರ್ತಿ ಪ್ರವಾಸಿಗರ ಆಗಮನವಿರುತ್ತದೆ. ನಾವು ದುಬಾರೆಯ ವಿಚಾರದ ಬಗ್ಗೆ ಪ್ರಶ್ನಿಸುವದಿಲ್ಲ. ಆದರೆ ಬರಪೊಳೆಯ ಕುರಿತಾದ ವಾಸ್ತವತೆಯನ್ನು ಅರಿತು ದರ ಏರಿಕೆಗೆ ಅವಕಾಶ ನೀಡಬೇಕೆಂದು ಮನವಿ ಮಾಡುವದಾಗಿ ಹೇಳಿದರು. ಪ್ರಸ್ತುತ ಕೊಡಗು ವೈಟ್‍ವಾಟರ್ ರ್ಯಾಫ್ಟಿಂಗ್ ಸಂಸ್ಥೆ ಸೇರಿದಂತೆ ಮಂಜುನಾಥ್ ಎಂಬವರ ಏಸ್ ಪೆಡ್ಲರ್ಸ್, ಕೂರ್ಗ್ ವೈಟ್‍ವಾಟರ್‍ನ ಬೋಸ್ ಮಾದಪ್ಪ ಹಾಗೂ ದೀಪಕ್ ಅವರುಗಳ ಸಂಸ್ಥೆಗೆ ಅನುಮತಿ ದೊರೆತಿದೆ.