ಸಿದ್ದಾಪುರ, ಜು. 4 : ಇಂಜಲಗೆರೆ, ಪುಲಿಯೇರಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು, ಕಾಡಾನೆಗಳ ಹಿಂಡಿನ ಪೈಕಿ ಒಂಟಿ ಸಲಗವೊಂದು ಮನೆಗಳ ಬಳಿಗೆ ಬರುತ್ತಿದ್ದು, ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿದೆ.

ಹಾಡಹಗಲಲ್ಲೇ ಕಾಡಾನೆ ರಾಜಾರೋಷವಾಗಿ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಾಳೆ ಸೇರಿದಂತೆ ಕೃಷಿಯನ್ನು ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪುಲಿಯೇರಿ ಗ್ರಾಮದ ಕೆಲ ಗ್ರಾಮಸ್ಥರ ಮನೆಯ ಸುತ್ತಲೂ ಕಾಡಾನೆ ಸುತ್ತಾಡುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಇತ್ತೀಚೆಗೆ ಕಾಡಾನೆ ದಾಳಿಗೆ ಕಣ್ಣಂಗಾಲ, ಬೀಟಿಕಾಡಿನಲ್ಲಿ ಕಾರ್ಮಿಕರಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಇಂಜಲಗೆರೆಯಲ್ಲಿ ಕಾಡಾನೆ ಉಪಟಳ ತೀವ್ರವಾಗಿದ್ದು, ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದಲ್ಲದೆ, ಗುಹ್ಯ, ಬೀಟಿಕಾಡು ಹಾಗೂ ಕರಡಿಗೋಡು ವ್ಯಾಪ್ತಿಯ ಲ್ಲಿಯೂ ಕಾಡಾನೆ ಹಿಂಡುಗಳು ಬೀಡು ಬಿಟ್ಟಿದ್ದು, ತುಂತುರು ಮಳೆಯಿಂದಾಗಿ ಕಾರ್ಮಿಕರಿಗೆ ಕಾಡಾನೆ ಬರುವದು ಕೂಡ ಗೊತ್ತಾಗುವದಿಲ್ಲ. ಕಾರ್ಮಿಕರು ಕೆಲಸಕ್ಕೆ ತೆರಳಲು ಕೂಡ ಹಿಂಜರಿ ಯುವ ಸ್ಥಿತಿ ನಿರ್ಮಾಣವಾಗಿದೆ.