ಅನುಮತಿ ರದ್ಧತಿಗೆ ಪಿಐಎಲ್ ಸಲ್ಲಿಕೆ

ಮಡಿಕೇರಿ, ಜು. 4: ಕೊಡಗು ಜಿಲ್ಲೆಯ ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿರುವ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‍ಗೆ ಸಂಬಂಧಿಸಿದಂತೆ ಪಿ.ಎಸ್. ಮೋಹನ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ತಾ. 9ಕ್ಕೆ ಮುಂದೂಡಿದೆ.

ನಿನ್ನೆ ಈ ಅರ್ಜಿಯ ವಿಚಾರಣೆ ನಡೆದ ಸಂದರ್ಭ ಈ ಚಟುವಟಿಕೆಗೆ ಕೇಂದ್ರ ಸರಕಾರದಿಂದ ಅನುಮತಿ ಪಡೆಯದಿದ್ದಲ್ಲಿ ಇದನ್ನು ಮುಚ್ಚಲು ಆದೇಶಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು. ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಎಚ್. ಟಿ. ನರೇಂದ್ರ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಟ ವಿಚಾರಣೆ ನಡೆಸಿತು. ಈ ಸಂದರ್ಭ ಅರ್ಜಿದಾರ ಮೋಹನ್ ಪರ ವಾದಿಸಿದ ವಕೀಲ ಎಲ್. ರಾಜಣ್ಣ ಅವರು ಜಂಗಲ್ ಲಾಡ್ಜ್ - ರೆಸಾರ್ಟ್‍ಗೆ ಅನುಮತಿ ಪಡೆದಿಲ್ಲ. ಇದರಿಂದ ಪರಿಸರ ನಾಶವಾಗುತ್ತಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯಲಾಗಿದೆಯೇ ಎಂದು ಸರಕಾರದ ಪರ ವಕೀಲರನ್ನು ವಿಭಾಗೀಯ ಪೀಠ ಪ್ರಶ್ನಿಸಿದ್ದು, ಈ ಬಗ್ಗೆ ಮಾಹಿತಿ ಒದಗಿಸಲು ಸರಕಾರಿ ವಕೀಲರು ಸಮಾಯಾವಕಾಶ ಕೋರಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ತಾ. 9ಕ್ಕೆ ಮುಂದೂಡಲಾಗಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅರ್ಜಿದಾರರಾದ ಪಿ.ಎಸ್. ಮೋಹನ್ ಅವರು ಇಲ್ಲಿ ಎಲ್ಲಾ ಷರತ್ತುಗಳು ಉಲ್ಲಂಘಿಸಿ ಚಟುವಟಿಕೆ ನಡೆಯುತ್ತಿದೆ. ಇದರಿಂದ ಪರಿಸರ ಹಾಗೂ ಸ್ಥಳೀಯ ಬುಡಕಟ್ಟು ಜನತೆಗೆ ಸಮಸ್ಯೆಗಳು ಎದುರಾಗುತ್ತಿದ್ದು, ಈ ಬಗ್ಗೆ ತಾವು ಪ್ರಶ್ನಿಸಿರುವದಾಗಿ ತಿಳಿಸಿದ್ದಾರೆ.