ಮಡಿಕೇರಿ, ಜು. 3: ಕೇರಿಯ ಪರಿಕಲ್ಪನೆಯನ್ನು ಪ್ರತಿಯೊಬ್ಬ ಸದಸ್ಯ ಅರಿತುಕೊಂಡಲ್ಲಿ ಮಾತ್ರ ಎಲ್ಲರೂ ಒಗ್ಗೂಡಿ-ಒಮ್ಮನಸ್ಸಿನಲ್ಲಿ ಮುಂದೆ ಸಾಗಲು ಸಾಧ್ಯ ಎಂದು ವೀರಾಜಪೇಟೆ ‘ಪಂಜರಪೇಟೆ ಕೊಡವ ಕೇರಿ’ಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಿಸಿದ್ದಾರೆ.
ಪಂಜರಪೇಟೆ ಕೊಡವ ಕೇರಿಯ 15ನೆ ವಾರ್ಷಿಕ ಮಹಾಸಭೆ ಇತ್ತೀಚೆಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಇವರು, ವರ್ಷಕ್ಕೆ ಒಂದೆರಡು ಬಾರಿ ಕೇರಿಯ ಸದಸ್ಯರು ಒಂದು ಕಡೆ ಸಭೆ ಸೇರಿ ಕಾರ್ಯ-ಕಲಾಪಗಳ ತರುವಾಯ ಒಟ್ಟಿಗೆ ಭೋಜನ ಮಾಡುವದರಿಂದ ಬೇರೆಯದೇ ಆದ ಉಲ್ಲಾಸ ಲಭಿಸುವದು. ಕೇರಿ ಎಂದರೆ ಬರೇ ಉಂಡು-ತೇಗುವದಕ್ಕಾಗಿ ರೂಪಿಸಿರುವ ಸಂಘಟನೆ ಆಗಬಾರದು. ಬದಲಾಗಿ ಕಷ್ಟ-ಸುಖಕ್ಕೆ ಭಾಗಿಯಾಗುವಂತಾಗಬೇಕೆಂದರು.
ವಿವಿಧ ವಿಷಯಕ್ಕೆ ಸಂಬಂಧಪಟ್ಟಂತೆ ಕೇರಿಯ ಮಾಜಿ ಅಧ್ಯಕ್ಷ ಕೇಳಪಂಡ ವಿನು ವಿಶ್ವನಾಥ್, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ಟಿ. ನಾಣಯ್ಯ, ಮೇಕೇರಿರ ರವಿ ಪೆಮ್ಮಯ್ಯ, ತ್ರಿವೇಣಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಚೆರ್‍ಮಂದಂಡ ಎಂ. ನಾಣಯ್ಯ, ನಡಿಕೇರಿಯಂಡ ಮಹೇಶ್, ಪೆಬ್ಬಾಟಂಡ ಚಂಗಪ್ಪ, ಮಾಜಿ ಅಧ್ಯಕ್ಷ ಚೊಟ್ಟೆಮಂಡ ನಾಣಿಯಪ್ಪ, ಬಲ್ಲಡಿಚಂಡ ಕಂಠಿ ಇತರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಳೆದ ಅಕ್ಟೋಬರ್ ತಿಂಗಳಲ್ಲಿ ವೀರಾಜಪೇಟೆಯಲ್ಲಿ ನಡೆಸಬೇಕಿದ್ದ ಕೊಡವ ಮೇಳವನ್ನು ಏಳುನಾಡು ಭಾಗದಲ್ಲಿ ಕಂಡುಬಂದ ಪ್ರಕೃತಿ ವಿಕೋಪದಿಂದಾಗಿ ಮುಂದೂಡ ಲಾಗಿದ್ದು, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆಸುವಂತೆ ಮಹಾಸಭೆ ಒಪ್ಪಿಗೆ ಕೊಡಲಾಯಿತು.
ಕಳ್ಳಿಚಂಡ ಡಿಂಪಲ್ ಪ್ರಾರ್ಥಿಸಿ, ಕೇರಿಯ ಕಾರ್ಯದರ್ಶಿ ಚೇಂದಂಡ ವಸಂತ್‍ಕುಮಾರ್ ಕಳೆದ ಮಹಾಸಭೆಯ ವರದಿ ಓದಿ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಕೊಪ್ಪಿರ ಅಮಿತ್ ಸೋಮಯ್ಯ ವಂದಿಸಿದರು.