ಸೋಮವಾರಪೇಟೆ,ಜು.3: ಸುಂಟಿಕೊಪ್ಪ ಹೋಬಳಿಯ ಹೇರೂರು ಗಿರಿಜನರ ಹಾಡಿಯಲ್ಲಿ ಮಳೆಗಾಲದಲ್ಲೂ ಸಹ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದ್ದು, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಕಾರ್ಯಗತಗೊಂಡಿಲ್ಲ ಎಂದು ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ಹಿತರಕ್ಷಣಾ ಸಮಿತಿಯ ನಾಮನಿರ್ದೇಶಿತ ಸದಸ್ಯ ಜೇನು ಕುರುಬರ ಸುಬ್ರಮಣಿ ಪ್ರಸ್ತಾಪಿಸಿದರು.ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.ಹೇರೂರು ಗಿರಿಜನ ಹಾಡಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ತಿಂಗಳುಗಳೇ ಕಳೆದಿದ್ದರೂ, ಇಂದಿಗೂ ನೀರಿನ ಸೌಲಭ್ಯ ಒದಗಿಸಿಲ್ಲ. ಗಿರಿಜನರ ಅಭಿವೃದ್ಧಿಗಾಗಿ ಮೀಸಲಾಗಿರುವ ಹಣ ಎಲ್ಲಿಗೆ ಹೋಗುತ್ತಿದೆ? ಎಂದು ಖಾರವಾಗಿ ಪ್ರಶ್ನಿಸಿದರು.
(ಮೊದಲ ಪುಟದಿಂದ) ಈ ಬಗ್ಗೆ ಸ್ಪಂದಿಸಿದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು, ಕೂಡಲೇ ನೀರಿನ ಸೌಲಭ್ಯವನ್ನು ಕಲ್ಪಿಸುವಂತೆ ಜಿಲ್ಲಾ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರಮೇಶ್ ಅವರಿಗೆ ಸೂಚಿಸಿದರು. ಮುಂದಿನ ಒಂದು ತಿಂಗಳ ಒಳಗೆ ನೀರು ಒದಗಿಸುವದಾಗಿ ಅಭಿಯಂತರ ಭರವಸೆ ನೀಡಿದರು.ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಳ್ಳಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಹಿತರಕ್ಷಣಾ ಸಮಿತಿಯ ಸದಸ್ಯ ಬಿ.ಇ. ಜಯೇಂದ್ರ ಹೇಳಿದರು. 35 ಕುಟುಂಬಗಳಲ್ಲಿ 5 ಕುಟುಂಬಗಳಿಗೆ ನೀರಿನ ಸೌಲಭ್ಯ ಸಿಗುತ್ತಿದ್ದು, ಉಳಿದವರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಹಾಗೂ ಎಇಇ ರಮೇಶ್ ಅವರಿಗೆ ತಹಶೀಲ್ದಾರರು ನಿರ್ದೇಶಿಸಿದರು.
ಸುಂಟಿಕೊಪ್ಪ ನಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗಳು ಜೇನುಕುರುಬರ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಎಂದು ಸುಬ್ರಮಣಿ ದೂರಿದರು. ಬಹುತೇಕ ಗಿರಿಜನರಿಗೆ ಕಂದಾಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಅಕ್ಷರ ಜ್ಞಾನವಿಲ್ಲ. ಈ ಕಾರಣದಿಂದ ರೇಷನ್‍ಕಾರ್ಡ್, ಆಧಾರ್‍ಕಾರ್ಡ್‍ಗಳನ್ನು ಅನೇಕರು ಪಡೆದಿಲ್ಲ. ಪ್ರತಿ ಹಾಡಿಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಅಭಿಯಾನದ ಮೂಲಕ ದಾಖಲೆಗಳನ್ನು ಮಾಡಿಕೊಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್ ಅವರು, ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.
ಎಸ್.ಸಿ. ಎಸ್.ಟಿ ಹಿತರಕ್ಷಣಾ ಸಭೆಗೆ ತಾಲೂಕಿನ ಪ್ರತಿ ಗಿರಿಜನರ ಹಾಡಿಯ ಇಬ್ಬರು ಪ್ರತಿನಿಧಿಗಳನ್ನು ಆಹ್ವಾನ ಮಾಡುವಂತೆ ಸುಬ್ರಮಣಿ ಸಭೆಗೆ ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಶೇಖರ್, ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಎ.ಇ.ಇ. ವೀರೇಂದ್ರ, ಆರ್.ಎಫ್.ಓ. ಲಕ್ಷ್ಮೀಕಾಂತ್, ಕಾರ್ಮಿಕ ಇಲಾಖೆಯ ಅಧಿಕಾರಿ ಮಹದೇವಸ್ವಾಮಿ ಮತ್ತಿತರರು ಇದ್ದರು.