ಕುಶಾಲನಗರ, ಜು. 3: ಮಂಗಳವಾರ ಕುಶಾಲನಗರದಲ್ಲಿ ನಡೆದ 3 ಲಕ್ಷ ರೂ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿ ಹಾಡುಹಗಲೆ ನಡೆದ ಈ ಘಟನೆಯಿಂದ ಕುಶಾಲನಗರದ ಜನತೆ ಆತಂಕಕ್ಕೊಳಗಾಗಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ನೆರೆಯ ಪಿರಿಯಾಪಟ್ಟಣ, ಅರಕಲಗೂಡು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಸಧ್ಯದಲ್ಲಿಯೇ ಆರೋಪಿಗಳ ಬಂಧನವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎರಡು ಬೈಕ್‍ಗಳಲ್ಲಿ ಬಂದ ಕಳ್ಳರ ತಂಡ ಸಿನಿಮೀಯ ರೀತಿಯಲ್ಲಿ ರೂ. 3 ಲಕ್ಷ ಹಣದ ಬ್ಯಾಗ್ ಅನ್ನು ಅಪಹರಿಸಿದೆ. ದುಷ್ಕರ್ಮಿಗಳು ಬ್ಯಾಂಕ್ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಈ ರೀತಿಯ ದಂಧೆಯಲ್ಲಿ ತೊಡಗಿದ್ದು ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಆರೋಪಿಗಳ ಸುಳಿವು ದೊರೆತಿದ್ದು ಪತ್ತೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.