*ಸಿದ್ದಾಪುರ, ಜು. 3: ಆಷಾಡ ಹತ್ತಿರವಾಗುತ್ತಿದೆ. ಜಿಲ್ಲೆಯ ಕೃಷಿ ಗದ್ದೆಗಳಿಗೆ ರೈತ ಇನ್ನೂ ಪಾದಾರ್ಪಣೆ ಮಾಡಿಲ್ಲ. ಈ ಬಾರಿ ಮಳೆಯ ಪ್ರಮಾಣ ಕ್ಷೀಣಿಸಿದೆ. ಈಗಾಗಲೇ ಕೊಡಗಿನಲ್ಲಿ ಬಿರುಸಿನ ಕೃಷಿ ಚಟುವಟಿಕೆ ಪ್ರಾರಂಭವಾಗಬೇಕಿತ್ತು. ಮುಂಗಾರು ಕೈಕೊಟ್ಟ ಕಾರಣ ರೈತರ ಮೊಗದಲ್ಲಿ ಉತ್ಸಾಹ ಕಾಣುತ್ತಿಲ್ಲ. ಮಳೆಯ ಪ್ರಮಾಣ ಕೆಲವೆಡೆ ಹೆಚ್ಚಾಗಿದ್ದರೂ ಕೃಷಿಯಲ್ಲಿ ತೊಡಗಿಕೊಳ್ಳಲು ರೈತರು ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿದೆ.

ಪರಿಹಾರ ವಿತರಣೆಯಲ್ಲಿ ಅಸಮರ್ಪಕತೆಯೇ ರೈತರು ಕೃಷಿಯಿಂದ ದೂರ ಉಳಿಯಲು ಕಾರಣ ಎಂದು ಜಿಲ್ಲೆಯ ಅನೇಕ ರೈತರು ಹೇಳುತ್ತಿದ್ದಾರೆ. ಕಳೆದ ವರ್ಷ ವಿಪರೀತ ಮಳೆ ಸುರಿದಿತ್ತು. ಜೊತೆಗೆ ಪ್ರಾಕೃತಿಕ ವಿಕೋಪವೂ ಸಂಭವಿಸಿತ್ತು. ಈ ಸಂದರ್ಭ ಉಂಟಾದ ಬೆಳೆ ನಷ್ಟಕ್ಕೆ ವರ್ಷ ಕಳೆದರೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಕಾಡಾನೆ ಸೇರಿದಂತೆ ಇತರೆ ವನ್ಯ ಮೃಗಗಳ ದಾಳಿಯಿಂದ ಫಸಲು ನಾಶ ಉಂಟಾಗಿದ್ದೂ ಅದಕ್ಕೂ ತೃಪ್ತಿಕರ ಪರಿಹಾರ ಲಭಿಸಿಲ್ಲ ಎಂಬ ಅಳಲನ್ನು ಜಿಲ್ಲೆಯ ರೈತ ತೋಡಿಕೊಳ್ಳುತ್ತಿದ್ದಾನೆ. ಕೃಷಿಗಾಗಿ ರೈತರು ಸಾಲ ಮಾಡಿದ್ದು ಪ್ರಾಕೃತಿಕ ವಿಕೋಪದಿಂದ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ರಾಜ್ಯ ಸರ್ಕಾರ ಘೋಷಿಸಿದ್ದ ಸಾಲ ಮನ್ನಾ ಕೂಡ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ ಎಂದು ಚೆಟ್ಟಳ್ಳಿ, ವಾಲ್ನೂರು- ತ್ಯಾಗತ್ತೂರು, ಸಿದ್ದಾಪುರದ ಕೃಷಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆಟ್ಟಳ್ಳಿ ಕೃಷಿ ಸಹಕಾರ ಸಂಘದಲ್ಲಿ 432 ಸಾಲಗಾರರು ಇದ್ದು ಇಲ್ಲಿ ಕೇವಲ 94 ಮಂದಿಗೆ ಸಾಲ ಮನ್ನಾ ಆಗಿದೆ. ಅಭ್ಯತ್‍ಮಂಗಲ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 200 ಮಂದಿ ಸಾಲಗಾರರಿದ್ದು 6 ಮಂದಿಗೆ ಮಾತ್ರ ಸಾಲ ಮನ್ನಾ ಆಗಿದೆ. ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 439 ಸಾಲಗಾರರಿದ್ದು 227 ಮಂದಿಗೆ ಸಾಲ ಮನ್ನ ಆಗಿದ್ದರೆ ಸಿದ್ದಾಪುರದ ಗುಹ್ಯ ಶ್ರೀ ಅಗಸ್ತ್ಯೇಶ್ವರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 147 ಮಂದಿ ಸಾಲಗಾರರಲ್ಲಿ ಕೇವಲ 18 ಮಂದಿಗೆ ಮಾತ್ರ ಸಾಲ ಮನ್ನಾ ಆಗಿದೆ. ಸರ್ಕಾರದ ಇಂತಹ ಧೋರಣೆಯಿಂದ ಬೇಸತ್ತಿರುವ ರೈತ ಕೃಷಿಯಿಂದ ಮುಕ್ತಿ ಹೊಂದಲು ಯೋಜಿಸುತ್ತಿರುವ ಸಂದರ್ಭದಲ್ಲಿ ಮುಂಗಾರು ಕೂಡ ರೈತನ ಬಾಳಿನಲ್ಲಿ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಜಿಲ್ಲಾಡಳಿತ, ಕೃಷಿ ಇಲಾಖೆ, ಸರ್ಕಾರ ರೈತರು ಕೃಷಿಯಿಂದ ದೂರ ಉಳಿಯದಂತೆ ಎಚ್ಚರ ವಹಿಸಬೇಕಿದೆ.ರೈತನ ಫಸಲಿಗೆ ಸೂಕ್ತ ಬೆಲೆ. ಬೆಂಬಲ ಬೆಲೆ ಮತ್ತು ನಷ್ಟ ಪರಿಹಾರವನ್ನು ನಿಗಧಿತ ಸಮಯದಲ್ಲಿ ತೃಪ್ತಿಕರ ಬೆಲೆ ನೀಡದಿದಲ್ಲಿ ಕೃಷಿ ಕಣ್ಮರೆಯಾಗುವ ಮತ್ತು ಕೃಷಿ ಗದ್ದೆಗಳು ನಿವೇಶನಗಳಾಗುವ ಅಪಾಯವಿದೆ.