ಕುಶಾಲನಗರ, ಜು. 3: ಕುಶಾಲನಗರದ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಗುಂಡೂರಾವ್ ಬಡಾವಣೆಯಲ್ಲಿ ಬಡವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ನಿವೇಶನವನ್ನು ನೀಡುವ ಸಂದರ್ಭ ಸ್ಥಳೀಯರಿಗೆ ಆದ್ಯತೆ ಕಲ್ಪಿಸಬೇಕೆಂದು ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್‍ರಾಜ್ ಆಗ್ರಹಿಸಿದ್ದಾರೆ. ಬಹಳಷ್ಟು ವರ್ಷದಿಂದ ಮೂಲಭೂತವಾಗಿ ಕುಶಾಲನಗರದಲ್ಲಿ ಹುಟ್ಟಿ ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿ ಇರುವ ಅನೇಕ ಕುಟುಂಬಗಳಿವೆ, ಪ್ರಸ್ತುತ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಸುಮಾರು 312 ಅರ್ಜಿಗಳನ್ನು ಪರಿಶೀಲಿಸುವ ಸಂದರ್ಭ, ಇತರೆ ಊರುಗಳ ನಾಗರಿಕರಿಂದ ಬಂದಿರುವ ಅರ್ಜಿಗಳನ್ನು ಸಹ ಗಣನೆಗೆ ತೆಗೆದುಕೊಂಡಿರುವದು ವಿಷಾದನೀಯ ಎಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದು ಸುಮಾರು 8 ತಿಂಗಳು ಆಗಿದೆ. ಮುಂದಿನ ದಿನಗಳಲ್ಲಿ ವಿಜೇತ ಅಭ್ಯರ್ಥಿಗಳಿಗೆ ಅಧಿಕಾರ ದೊರಕುವ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಗಮನಕ್ಕೆ ತೆಗೆದುಕೊಳ್ಳದೆ, ಬಹಳಷ್ಟು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆಯನ್ನು ತರಾತುರಿಯಲ್ಲಿ ತೆಗೆದುಕೊಂಡಿರುವದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ತಿಳಿಸಿದರು. ಆರ್ಥಿಕವಾಗಿ ದುರ್ಬಲವಾದ ಜನರಿಗೆ ನಿವೇಶನ ನೀಡುವ ಬಗ್ಗೆ ಚರ್ಚೆ ಹಾಗೂ ನೆರೆ ಸಂತ್ರಸ್ತರಿಗೆ ಗುಂಪು ಮನೆಗಳನ್ನು ನಿರ್ಮಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವದು ಗೊಂದಲವನ್ನು ನಿರ್ಮಾಣ ಮಾಡಿದೆ. ಈ ನಿವೇಶನಗಳನ್ನು ಹಂಚಿಕೆ ಮಾಡುವಾಗ ಮೊದಲು ಕುಶಾಲನಗರದ ಜನತೆಗೆ ನಂತರ ಕೊಡಗಿನ ಇತರ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.