ಸೋಮವಾರಪೇಟೆ, ಜು. 3: ಜಿಲ್ಲೆಯ ಯುವ ಕಬಡ್ಡಿ ಆಟಗಾರ ಹೊಟ್ಟೆಯಂಡ ಸಚಿನ್ ಪೂವಯ್ಯ ಅವರು ತಾ. 20 ರಿಂದ 28ರ ವರೆಗೆ ಮಲೇಶಿಯಾದಲ್ಲಿ ನಡೆಯುವ ಮೇಲಕ ಕಬಡ್ಡಿ ವಿಶ್ವಕಪ್ 2019 ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ .

ಕಳೆದ ಬಾರಿ ದೇಶದ ಪ್ರತಿಷ್ಠಿತ ಪ್ರೊ ಕಬ್ಬಡ್ಡಿ ಲೀಗ್ ಮಾದರಿಯಲ್ಲಿ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‍ನಲ್ಲಿ ಪುಣೆ ಫ್ರೈಡ್ ತಂಡದ ಪರ ಆಟವಾಡಿದ್ದ ಇವರು, ತಮ್ಮ ಉತ್ತಮ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮದ ಪೂವಯ್ಯ ಹೆಚ್.ಎಸ್. ಮತ್ತು ಸರಸು ಹೆಚ್.ಪಿ. ದಂಪತಿಯ ಪುತ್ರರಾಗಿರುವ ಸಚಿನ್, ಬಾಲ್ಯದಿಂದಲೇ ಕಬಡ್ಡಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು.

ತಮ್ಮ ವಿದ್ಯಾಭ್ಯಾಸವನ್ನು ಸೋಮವಾರಪೇಟೆ ಹಾಗೂ ಕುಶಾಲನಗರದಲ್ಲಿ ಮುಗಿಸಿದ ನಂತರ ಸೋಮವಾರಪೇಟೆಯ ಸತ್ಯ ಸ್ಪೋಟ್ಸ್ ಕ್ಲಬ್‍ನ ಕಬಡ್ಡಿ ತಂಡದ ಸದಸ್ಯರಾದರು. ಕ್ಲಬ್‍ನ ದೈಹಿಕ ಶಿಕ್ಷಣ ಶಿಕ್ಷಕ ಕೆ.ಬಿ. ಸತೀಶ್ ಅವರ ಬಳಿ ತರಬೇತಿಯನ್ನು ಪಡೆದು ವಿವಿಧ ಪಂದ್ಯಾವಳಿಗಳಲ್ಲಿ ಉತ್ತಮ ಆಟಗಾರರಾಗಿ ರೂಪುಗೊಂಡಿದ್ದು, ಇದೀಗ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.