ಗೋಣಿಕೊಪ್ಪ ವರದಿ, ಜು. 3 ; ನೂತನವಾಗಿ ಘೋಷಣೆಯಾಗಿರುವ ಪೊನ್ನಂಪೇಟೆ ತಾಲೂಕು ಅನುಷ್ಠಾನಕ್ಕೆ ಸರ್ಕಾರದ ಮಟ್ಟದಲ್ಲಿ ಮುಂದುವರಿ ಯಲು ಉಪವಿಭಾಗ ಅಧಿಕಾರಿ ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪೊನ್ನಂಪೇಟೆ ತಾಲೂಕು ಕಚೇರಿ ನಿರ್ವಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ಪೊನ್ನಂಪೇಟೆ ತಾಲೂಕು ಚಟುವಟಿಕೆ ಅನುಷ್ಠಾನಕ್ಕೆ ಚಾಲನೆ ನೀಡಲು ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಜನಪ್ರತಿನಿಧಿಗಳು, ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ, ಹಿರಿಯ ನಾಗರಿಕ ವೇದಿಕೆ ಪ್ರಮುಖರುಗಳು ಪಾಲ್ಗೊಂಡು ಸಲಹೆ ನೀಡಿದಂತೆ ನಿರ್ಧರಿಸಲಾಯಿತು.

ತಾಲೂಕು ಕಚೇರಿ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಗುರುತಿಸಲು ತಹಶೀಲ್ದಾರ್‍ಗೆ ಉಪವಿಭಾಗ ಅಧಿಕಾರಿ ಜವರೇಗೌಡ ಸೂಚಿಸಿದರು. ಸರ್ವೇ ಇಲಾಖೆ ವತಿಯಿಂದ ಪೊನ್ನಂಪೇಟೆ ತಾಲೂಕಿಗೆ ಒಳಪಡುವ ಗ್ರಾಮಗಳನ್ನು ಸೇರಿಸಿಕೊಂಡು ನಕ್ಷೆ ತಯಾರಿಸುವಂತೆ ಅಧಿಕಾರಿ ಸೂಚಿಸಿದರು.

ತಾಲೂಕಿಗೆ ಬೇಕಾಗುವ ಇಲಾಖೆಗಳ ಸಿಬ್ಬಂದಿ ಸಂಖ್ಯೆ, ಅನುದಾನಕ್ಕೆ ಮನವಿ ಮಾಡುವದು, ಕಚೇರಿ ಇಲ್ಲದ ಇಲಾಖೆಗಳಿಗೆ ತಾತ್ಕಾಲಿಕ ತಾಲೂಕು ಕಚೇರಿಯಲ್ಲಿ ಅವಕಾಶ ನೀಡುವಂತೆ ನಿರ್ಧರಿಸ ಲಾಯಿತು. ಪೊನ್ನಂಪೇಟೆಯಲ್ಲಿಯೇ ಸಾಕಷ್ಟು ಇಲಾಖೆಗಳ ಕಚೇರಿ ಇರುವದರಿಂದ ಕಚೇರಿ ಇಲ್ಲದ ಇಲಾಖೆಗಳಿಗೆ ಶಾಶ್ವತ ಜಾಗ ಒದಗಿಸಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್, ಸರ್ವೇ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸ ಲಾಯಿತು.

ತಾಲೂಕಿಗೆ ಒಳಪಡುವ 21 ಗ್ರಾಮ ಪಂಚಾಯಿತಿಗಳ ಮೂಲಕ ತಾಲೂಕಿಗೆ ಒಳಪಡುವ ಗ್ರಾಮಗಳ ಬಗ್ಗೆ ಆಕ್ಷೇಪಣೆ ಇಲ್ಲದ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಧರಿಸಬೇಕಿದೆ. ಆದರೆ, ಸಮಯ ವಿಳಂಬವಾಗಿರುವದರಿಂದ ತಕ್ಷಣ ತಾಲೂಕು ಆಡಳಿತ ಕಾರ್ಯ ರೂಪಕ್ಕೆ ತರುವ ಉದ್ದೇಶದಿಂದ ಇದೇ ಸಭೆಯಲ್ಲಿ ಆಕ್ಷೇಪಣೆ ಇಲ್ಲ ಎಂಬ ನಿರ್ಣಯ ವನ್ನು ತೆಗೆದುಕೊಳ್ಳ ಲಾಯಿತು. 21 ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಪಾಲ್ಗೊಂಡು ಇದಕ್ಕೆ ಸಮ್ಮತಿ ಸೂಚಿಸಿದರು. ಉಳಿದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರುಗಳು, ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ, ಹಿರಿಯ ನಾಗರಿಕ ವೇದಿಕೆ ಪ್ರಮುಖರುಗಳು ಸಭೆಯಲ್ಲಿ ಪಾಲ್ಗೊಂಡು ತಾಲೂಕು ಆಡಳಿತ ನಡೆಸಲು ಸರ್ಕಾರದಿಂದ ಎಲ್ಲಾ ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿದರು.

ತಾಲೂಕು ರಚನೆಗೆ ಗಡಿ ಗುರುತು, ಗ್ರಾಮಗಳ ಸೇರ್ಪಡೆ, ಎಲ್ಲಾ ವಿಭಾಗದಲ್ಲೂ ಮುಂದಾಳತ್ವ ವಹಿಸಿದ್ದ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಸಮ್ಮುಖದಲ್ಲಿ ಈಗಾಗಲೇ ಸರ್ಕಾರ ನೇಮಿಸಿರುವ ಸಮಿತಿ ಕಾರ್ಯನಿರ್ವಹಿಸುವಂತೆ ನಿರ್ಧರಿಸ ಲಾಯಿತು.

ಉಪವಿಭಾಗ ಅಧಿಕಾರಿ ಜವರೇಗೌಡ ಮಾತನಾಡಿ, ಸರ್ಕಾರವು ನೂತನ ತಾಲೂಕು ಆಡಳಿತ ಅನುಷ್ಠಾನಕ್ಕೆ ಸಮಿತಿ ರಚಿಸಿದೆ. ಇದರಂತೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಸಭೆ ಕರೆದು ತಾತ್ಕಾಲಿಕ ತಾಲೂಕು ಕಚೇರಿ ಗುರುತಿಸುವದು, ಶಾಶ್ವತ ತಾಲೂಕು ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ಚಾಲನೆ ನೀಡಲು ನಾವು ಮುಂದಾಗಿ ದ್ದೇವೆ. ಇದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗು ವದು. ಮೂಲಭೂತ ಸೌಲಭ್ಯ ಅನುಷ್ಠಾನ, ಆರ್ಥಿಕ ಅನುದಾನಕ್ಕೆ ಮನವಿ ಮಾಡಲಾಗು ವದು. ತಹಶೀಲ್ದಾರ್ ನೇಮಕ ಸೇರಿದಂತೆ ಪ್ರತಿ ವಿಭಾಗದಲ್ಲೂ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗು ವದು ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಶಾಂತಿಯುತವಾಗಿ ತಾಲೂಕು ರಚನೆಗೆ ನಡೆದಿದ್ದ ಹೋರಾಟಕ್ಕೆ ಬೆಲೆ ಲಭಿಸಿದೆ. ಇದನ್ನೇ ಮುಂದುವರಿಸುವ ಅವಶ್ಯಕತೆ ಇದೆ. ರಾಜ್ಯಕ್ಕೆ ಪೊನ್ನಂಪೇಟೆ ತಾಲೂಕು ಮಾದರಿಯಾಗುವಂತೆ ಎಲ್ಲರೂ ಕೈಜೋಡಿಸಬೇಕಿದೆ. ಸರ್ಕಾರದಿಂದ ಅನುದಾನ ಬಿಡುಗಡೆಗೆ ವ್ಯವಹರಿಸ ಲಾಗುವದು. ಜುಲೈ ಕೊನೆಯಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಮಾಚಯ್ಯ, ಸಂಚಾಲಕ ಮಾಚಿಮಾಡ ರವೀಂದ್ರ, ಹಿರಿಯರಾದ ಅಡ್ಡಂಡ ಕಾರ್ಯಪ್ಪ, ಕಳ್ಳೇಂಗಡ ಗಣಪತಿ ಸಲಹೆ ನೀಡಿದರು.

ತಹಶೀಲ್ದಾರ್ ಗೋವಿಂದರಾಜು, ತಾಲೂಕು ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ಇಒ ಜಯಣ್ಣ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮಾಂಗೇರ ಪದ್ಮಿನಿ ಪೊನ್ನಪ್ಪ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರಾ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಪಿ.ಬಿ. ಪೂಣಚ್ಚ, ಎಸಿಎಫ್ ಶ್ರೀಪತಿ, ನಾಗರಿಕ ಹೋರಾಟ ಸಮಿತಿಯ ಪ್ರಮುಖರು ಗಳಾದ ಮೂಕಳೇರ ಕುಶಾಲಪ್ಪ, ಚೆಪ್ಪುಡೀರ ಸೋಮಯ್ಯ, ಆಲೀರ ಎರ್ಮುಹಾಜಿ, ಮತ್ರಂಡ ಅಪ್ಪಚ್ಚು, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ರೈತಸಂಘದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಪಾಲ್ಗೊಂಡಿದ್ದರು.

-ಸುದ್ದಿಪುತ್ರ