ಸೋಮವಾರಪೇಟೆ, ಜು. 3: ಜಾನುವಾರು ಸಾಕಣೆಯಿಂದ ಆರ್ಥಿಕ ಹಾಗೂ ಕೃಷಿಗೆ ಪೂರಕ ವಾಗಿಯೂ ಲಾಭವಾಗಲಿದ್ದು, ಕೃಷಿಕರೆಲ್ಲರೂ ಜಾನುವಾರು ಸಾಕಲು ಮುಂದಾಗ ಬೇಕೆಂದು ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.

ಸಮೀಪದ ಯಲಕನೂರಿನ ಬೀರೇದೇವರ ದೇವಾಲಯ ಆವರಣದಲ್ಲಿ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಅಂಗವಾಗಿ ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಬರಡು ರಾಸುಗಳ ಚಿಕಿತ್ಸೆ ಹಾಗೂ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಶತಮಾನ ವರ್ಷಾಚರಣೆಯ ಪ್ರಯುಕ್ತ ತಿಂಗಳಿಗೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಶಿಬಿರದ ನೇತೃತ್ವ ವಹಿಸಿದ್ದ ಸೋಮವಾರಪೇಟೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್.ವಿ. ಬಾದಾಮಿ ಮಾತನಾಡಿ, ಇತ್ತೀಚೆಗಿನ ಹವಾಮಾನ ವೈಪರೀತ್ಯದಿಂದಾಗಿ ಜಾನುವಾರುಗಳಿಗೆ ರೋಗ-ರುಜಿನಗಳು ಬಾಧಿಸುತ್ತಿದ್ದು, ಕೃಷಿಕರು ಪಶುಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಜಿ. ಸುರೇಶ್, ಪಶು ಸಂಗೋಪನಾ ಇಲಾಖೆಯ ವೈದ್ಯರಾದ ಭಾನುಪ್ರಕಾಶ್, ವಸಂತ್, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಯ್ಯ, ಇಫ್ಕೋ ಸಂಸ್ಥೆಯ ರಾಜ್ಯ ನಿರ್ದೇಶಕ ಎಂ.ಎಸ್. ಲಕ್ಷ್ಮೀಕಾಂತ್, ಸಂಘದ ನಿರ್ದೇಶಕರುಗಳು, ಕಾರ್ಯ ನಿರ್ವಹಣಾಧಿಕಾರಿ ಹೆಚ್.ಪಿ. ರವೀಂದ್ರ, ಬೀರೇದೇವರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.