ಸೋಮವಾರಪೇಟೆ, ಜು. 3: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರಿನಲ್ಲಿ ವಿದ್ಯುತ್ ಕಂಬವೊಂದು ಮುರಿದು ತಂತಿಯ ಸಹಾಯದಲ್ಲಿ ನೇತಾಡುತ್ತಿರುವ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದ್ದರೂ ವಿದ್ಯುತ್ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಕಳೆದ ಜೂನ್ 17ರಂದು ಬೆಳಗ್ಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ನೇರವಾಗಿ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದ್ದು, ಪರಿಣಾಮ ಕಂಬ ಮುರಿತಕ್ಕೆ ಒಳಗಾಗಿದೆ. 11 ಕೆ.ವಿ. ವಿದ್ಯುತ್ ಪ್ರವಹಿಸುವ ತಂತಿಯಲ್ಲಿ ಕಂಬ ನೇತಾಡುತ್ತಿದ್ದು, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸನ್ನಿವೇಶ ನಿರ್ಮಾಣವಾಗಿದೆ.
ವಿದ್ಯುತ್ ಇಲಾಖೆಯವರು ಕಂಬಕ್ಕೆ ರೂ. 8ಸಾವಿರ ಪಡೆದಿದ್ದಾರೆ. ಆದರೆ ಇದುವರೆಗೂ ಕಂಬವನ್ನು ಬದಲಾಯಿಸುವ ಗೋಜಿಗೆ ಹೋಗಿಲ್ಲ. 11 ಕೆ.ವಿ. ವಿದ್ಯುತ್ ಪ್ರವಹಿಸುವ ಈ ಕಂಬ ಯಾವ ಕ್ಷಣದಲ್ಲಾದರೂ ಧರಾಶಾಹಿಯಾಗಬಹುದು. ಕಂಬ ಮುರಿದಿರುವದರಿಂದ ಮರದ ಕೊಂಬೆಗಳು ತಾಗುತ್ತಿದ್ದು, ಮರದಲ್ಲೂ ವಿದ್ಯುತ್ ಪ್ರವಹಿಸುತ್ತಿದೆ. ಶಾಲೆ, ಅಂಗನವಾಡಿ ಮಕ್ಕಳು ಇದೇ ಮಾರ್ಗದಲ್ಲಿ ತೆರಳುತ್ತಿದ್ದು, ಅಪಾಯ ಸಂಭವಿಸುವ ಮುನ್ನ ಇಲಾಖಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ವಿಶ್ವ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ ಬದಿಯಲ್ಲಿಯೇ ಇಂತಹ ಅಪಾಯಕಾರಿ ವಿದ್ಯುತ್ ಕಂಬ ಇದ್ದರೂ ಈವರೆಗೆ ಬದಲಾಯಿಸದಿರುವದು ಖಂಡನೀಯ ಎಂದು ಸ್ಥಳೀಯರಾದ ಮಂಜುನಾಥ್ ಅಭಿಪ್ರಾಯಿಸಿದ್ದಾರೆ.