ಕುಶಾಲನಗರ, ಜು. 3: ಕಲುಷಿತ ನೀರು ನೇರವಾಗಿ ಕಾವೇರಿ ನದಿಗೆ ಸೇರದಂತೆ ಇಂಗು ಗುಂಡಿ ನಿರ್ಮಾಣ ಕಾಮಗಾರಿಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಚಾಲನೆ ನೀಡಿದೆ. ಪಟ್ಟಣದ ಎಲ್ಲೆಡೆಗಳಿಂದ ಹರಿದು ಬರುತ್ತಿರುವ ತ್ಯಾಜ್ಯ ಮಿಶ್ರಿತ ಕಲುಷಿತ ನೀರು ಸಂಪೂರ್ಣ ನದಿಗೆ ಸೇರ್ಪಡೆಗೊಂಡು ನದಿ ನೀರು ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಮಾಡಿದ ಮೇರೆಗೆ ಈ ಕಾಮಗಾರಿಗೆ ಕ್ರಮಕೈಗೊಂಡಿದ್ದಾರೆ. ಕೂಡಲೇ ಇಂಗು ಗುಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಆಂದೋಲನ ಸಮಿತಿ ಪ್ರಮುಖರು ಇತ್ತೀಚೆಗೆ ಪ.ಪಂ. ಕಚೇರಿ ಮುಂಭಾಗ ಸಾಂಕೇತಿಕ ಉಪವಾಸ ಸತ್ಯಾಗ್ರಹ ಹೂಡಿದ್ದರು. ಪಟ್ಟಣದ ಬೈಚನಹಳ್ಳಿ, ಕನ್ನಡ ಭಾರತಿ ಕಾಲೇಜು, ದಂಡಿನಪೇಟೆ, ಮಾರುಕಟ್ಟೆ ಹಾಗೂ ಸಾಯಿ ದೇವಾಲಯ ಬಳಿ ದಿನವೊಂದಕ್ಕೆ ಅಂದಾಜು 5 ಲಕ್ಷ ಲೀಟರ್‍ಗಿಂತಲೂ ಅಧಿಕ ಪ್ರಮಾಣದ ಕಲುಷಿತ ನೀರು ನದಿ ಸೇರುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಕುಶಾಲನಗರದಲ್ಲಿ ಸ್ವಚ್ಛ ಕಾವೇರಿಗಾಗಿ ಕೈಗೆತ್ತಿಕೊಂಡಿರುವ ಒಳಚರಂಡಿ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಇದರಿಂದ ಈ ಆವಾಂತರ ಸೃಷ್ಟಿಯಾಗಿದೆ. ಈ ಹಿನ್ನೆಲೆ ನದಿಗೆ ನೇರವಾಗಿ ಕಲುಷಿತ ಸೇರದಂತೆ ನದಿ ನೀರು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಇಂಗು ಗುಂಡಿ ನಿರ್ಮಾಣ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ.