*ಗೋಣಿಕೊಪ್ಪಲು, ಜು. 3: ದೇಶದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಹೆಗ್ಗಳಿಕೆಗೆ ಬಿಜೆಪಿ ಬಾಜನವಾಗಿದೆ. ಇದೀಗ ಒಟ್ಟು 11 ಕೋಟಿ ಸದಸ್ಯರಿದ್ದು, ಈ ಸಂಖ್ಯೆಯನ್ನು ದ್ವಿಗುಣಗೊಳಿಸ ಬೇಕಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭಾರತೀಶ್ ಹೇಳಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಕೇವಲ 3 ಕೋಟಿ ಸದಸ್ಯರಿದ್ದರು. ಅಂದು ಚೀಟಿ ಮೂಲಕ ಹೆಸರು ನೋಂದಾಯಿಸಿ ಕೊಳ್ಳಲಾಗುತ್ತಿತ್ತು. ಇದೀಗ ಆನ್ ಲೈನ್ ಮೂಲಕ ಸದಸ್ಯತ್ವ ಪಡೆಯುವ ಅವಕಾಶ ಲಭಿಸಿದೆ. ಕಾರ್ಯಕರ್ತರು ಮನೆಮನೆಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬೇಕು. ಈ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.
ಸದಸ್ಯ ಅಭಿಯಾನ ಸಮಿತಿ ಜಿಲ್ಲಾ ಸಂಚಾಲಕ ರವಿಕುಶಾಲಪ್ಪ ಮಾತನಾಡಿ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಆಡಳಿತವನ್ನು ಕಂಡ ಜನತೆ ಪಕ್ಷದ ಸದಸ್ಯತ್ವ ಪಡೆಯಲು ಮುಂದೆ ಬರುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಪಡೆಯಿಂದಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜಯಭೇರಿ ಪಡೆಯಲು ಸಾಧ್ಯವಾಯಿತು. ಇದೀಗ ಮುಂದೆ ಬರಲಿರುವ ಚುನಾವಣೆ ಗಳನ್ನು ಇದೇ ರೀತಿ ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ. ಇದಕ್ಕೆ ಸದಸ್ಯರನ್ನು ಕ್ರಿಯಾಶೀಲಗೊಳಿಸ ಬೇಕಾಗಿದೆ ಎಂದು ನುಡಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನುಮುತ್ತಪ್ಪ ಮಾತನಾಡಿ ಮೋದಿಯವರ ಅಭಿವೃದ್ಧಿಪರ ಆಡಳಿತ, ಅಮಿತ್ ಶಾ ಅವರ ಚಾಣಾಕ್ಷತನಕ್ಕೆ ಮಾರು ಹೋದ ಜನತೆ ಪಕ್ಷವನ್ನು ಅಭೂತಪೂರ್ವವಾಗಿ ಬೆಂಬಲಿಸುತ್ತಿದ್ದಾರೆ. ಕಾರ್ಯಕರ್ತರು ಮತ್ತಷ್ಟು ಹುರುಪಿನಿಂದ ಕೆಲಸಮಾಡಿ ಪಕ್ಷದ ಬೆಳವಣಿಗೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೂತ್ ಮಟ್ಟದ ಉತ್ತಮ ಕಾರ್ಯಕರ್ತರ ಪಡೆಯನ್ನು ಹೊಂದಲಾಗಿದೆ. ಜಿಲ್ಲಾ ಮಟ್ಟದಲ್ಲಿಯೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರನ್ನು ಹೊಂದುವದು ಅಗತ್ಯವಾಗಿದೆ ಎಂದು ನುಡಿದರು.
ಸಹ ಸಂಚಾಲಕ ರಾಬಿನ್ ದೇವಯ್ಯ ಮಾತನಾಡಿದರು. ಪಕ್ಷದ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಯಮುನಾ ಚಂಗಪ್ಪ, ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಸುವಿನ್ ಗಣಪತಿ, ಲಾಲಾ ಭೀಮಯ್ಯ, ಮುಖಂಡರಾದ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಹಾಜರಿದ್ದರು.
-ವರದಿ : ಎನ್.ಎನ್.ದಿನೇಶ್