ಸೋಮವಾರಪೇಟೆ, ಜು.3: ಗಾಳಿಗೆ ಸಿಲ್ವರ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ಮಾದಾಪುರ ಸಮೀಪದ ಇಗ್ಗೋಡ್ಲಿನಲ್ಲಿ ಇಂದು ಮಧ್ಯಾಹ್ನ ಸಂಭವಿಸಿತು.
ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಇಗ್ಗೋಡ್ಲಿನಲ್ಲಿ ಸಿಲ್ವರ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮರದೊಂದಿಗೆ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿದ್ದು, ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಈ ಮಾರ್ಗವಾಗಿ ಬರುತ್ತಿದ್ದ ಬಸ್ ಸೇರಿದಂತೆ ಇತರ ವಾಹನಗಳ ಸವಾರರು ಕೆಲಕಾಲ ತೊಂದರೆ ಅನುಭವಿಸುವಂತಾಯಿತು. ಸ್ಥಳೀಯರ ನೆರವಿನೊಂದಿಗೆ ಮರವನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಸುಗಮವಾಯಿತು.