ಸೋಮವಾರಪೇಟೆ, ಜು. 3: ಸಮಾಜವು ರೋಟರಿ ಸಂಸ್ಥೆಯ ಮೇಲೆ ಅಪಾರವಾದ ನಿರೀಕ್ಷೆ ಹೊಂದಿದ್ದು, ಸಮಾಜದ ಭರವಸೆ ಹುಸಿಗೊಳಿಸದಂತೆ ರೋಟರಿ ಸದಸ್ಯರು ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ ಎಂದು ರೋಟರಿ ಜಿಲ್ಲೆ 3181 ನ ಹಿಂದಿನ ಸಾಲಿನ ರಾಜ್ಯಪಾಲ ಪಿ. ರೋಹಿನಾಥ್ ಹೇಳಿದ್ದಾರೆ.

ಆಲೂರು ಸಿದ್ದಾಪುರದಲ್ಲಿ ನೂತನವಾಗಿ ಮಲ್ಲೇಶ್ವರ ಆಲೂರು ಸಿದ್ದಾಪುರ ರೋಟರಿ ಕ್ಲಬ್ ನ್ನು ಉದ್ಘಾಟಿಸಿ ಮಾತನಾಡಿದ ಪಿ. ರೋಹಿನಾಥ್, ಕೊಡಗಿನಲ್ಲಿ ಜಲಪ್ರಳಯದಿಂದ ಸಂತ್ರಸ್ತರಾದವರಿಗೆ ರೋಟರಿ ತುರ್ತಾಗಿ ಸ್ಪಂದಿಸಿ 25 ಮನೆಗಳನ್ನು ರೂ. 1.25 ಕೋಟಿ ವೆಚ್ಚದಲ್ಲಿ ಈಗಾಗಲೇ ನಿರ್ಮಿಸಿ ಕೊಟ್ಟಿದೆ. ಈ ಮನೆಗಳ ನಿರ್ಮಾಣಕ್ಕೆ ಜಗತ್ತಿನಾದ್ಯಂತಲಿನಿಂದ ರೂ. 1.75 ಕೋಟಿ ಲಭಿಸಿದ್ದು, ಉಳಿದ ಹಣದಲ್ಲಿ ಮತ್ತಷ್ಟು ಮನೆ ನಿರ್ಮಾಣಕ್ಕೆ ಮುಂದಾಗುವದಾಗಿ ಹೇಳಿದರು. ರೋಟರಿ ಪ್ರಮುಖರು ಇತರರ ಬಳಿ ಭಿಕ್ಷೆ ಬೇಡಿ ಮನೆ ನಿರ್ಮಾಣಕ್ಕೆ ಹಣ ಕ್ರೋಡಿಕರಿಸಿದೆವು. ಆದರೆ, ಕೊಡಗಿನ ಸಂತ್ರಸ್ತರಿಗೆ ಸರ್ಕಾರಕ್ಕೆ ಸಾವಿರಾರು ದಾನಿಗಳು ನೀಡಿದ ಕೋಟ್ಯಾಂತರ ಹಣ ಇನ್ನೂ ಸರಿಯಾಗಿ ಬಳಕೆಯಾಗದಿರುವದು ವಿಷಾಧನೀಯ ಎಂದೂ ಹೇಳಿದರು.

ರೋಟರಿ ಜಿಲ್ಲೆಯ ಗವರ್ನರ್ ಆಗಿ ತಾನು ಕೈಗೊಂಡಿದ್ದ ಅಂಗನವಾಡಿಗಳಿಗೆ ಕಾಯಕಲ್ಪ ಯೋಜನೆಯಡಿ 4 ಕಂದಾಯ ಜಿಲ್ಲೆಗಳಲ್ಲಿ 525 ಅಂಗನವಾಡಿಗಳು ಕಾಯಕಲ್ಪ ಪಡೆದಿದೆ. ಈ ಯೋಜನೆ ಮೆಚ್ಚಿ ಕೇಂದ್ರ ಸರ್ಕಾರವೂ ಇದೀಗ ಪರಿಸರ ತಜ್ಞ ಕಸ್ತೂರಿರಂಗನ್ ನೇತೃತ್ವದಲ್ಲಿ ಅಂಗನವಾಡಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದೆ ಎಂದು ಹೇಳಿದರು.

ರೋಟರಿ ವಲಯ ಸಹಾಯಕ ರಾಜ್ಯಪಾಲ ಪಿ. ನಾಗೇಶ್ ಮಾತನಾಡಿ, ಸ್ನೇಹದ ಸಂಕೇತ ವಾಗಿರುವ ರೋಟರಿ ಸಂಸ್ಥೆಗಳು ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಯೋಜನೆ ಜಾರಿಗೊಳಿಸಬೇಕು. ಆ ಮೂಲಕ ಸಮಾಜಸೇವೆಯ ತನ್ನ ಮೂಲ ಉದ್ದೇಶದ ಗುರಿ ಸಾಧಿಸಬೇಕೆಂದರು. ರೋಟರಿ ಜಿಲ್ಲೆಯ ಸದಸ್ಯತ್ವ ನೋಂದಣಿ ಸಮಿತಿಯ ಮಾಜಿ ಅಧ್ಯಕ್ಷ, ಆರ್.ಸಿ.ಸಿ. ಸಮಿತಿಯ ನೂತನ ಜಿಲ್ಲಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ರೋಟರಿ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 14 ಹೊಸ ರೋಟರಿ ಕ್ಲಬ್ ಗಳೊಂದಿಗೆ 825 ನೂತನ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಜಾಗತಿಕ ದಾಖಲೆ ಮಾಡಲಾಗಿದೆ. ಹೊಸ ಸದಸ್ಯರು ರೋಟರಿ ಸಂಸ್ಥೆಗೆ ಸೇರಲು ಉತ್ಸುಕರಾಗಿರುವದು ಉತ್ತಮ ಬೆಳವಣಿಗೆಯಾಗಿದ್ದು ಸಮಾಜಸೇವೆಗೆ ಹೊಸ ಕೈಜೋಡಣೆಯಾಗುತ್ತಲೇ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.

ರೋಟರಿ ವಲಯ ಕಾರ್ಯ ದರ್ಶಿ, ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಕುಟುಂಬ ಸದಸ್ಯರನ್ನೂ ತೊಡಗಿಸಿಕೊಂಡು ರೋಟರಿ ಸದಸ್ಯರು ಕಾರ್ಯ ನಿರ್ವಹಿಸಿದರೆ ಹೆಚ್ಚಿನ ಯಶಸ್ಸು ಸಾಧ್ಯ ರೋಟರಿ ಸಂಸ್ಥೆಯೊಂದು ಗ್ರಾಮ ದಲ್ಲಿದ್ದರೆ ಆ ಗ್ರಾಮದ ಸರ್ವ ತೋಮುಖ ಪ್ರಗತಿಗೆ ರೋಟರಿಯ ಕಾಣಿಕೆ ಮಹತ್ವ ದ್ದಾಗಿರುತ್ತದೆ. ಗ್ರಾಮೀಣ ಭಾಗಗಳ ಲ್ಲಿಯೂ ರೋಟರಿ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಗ್ರಾಮಗಳತ್ತ ರೋಟರಿ ನಡಿಗೆ ಪ್ರಾರಂಭಿಸಿದ್ದು ಗಮನಾರ್ಹ ಎಂದು ಅನಿಲ್ ಎಚ್.ಟಿ. ಹೇಳಿದರು.

ರೋಟರಿ ವಲಯ ಸೇನಾನಿ ಹೆಚ್.ಎಸ್. ವಸಂತ್ ಕುಮಾರ್, ಸೋಮವಾರಪೇಟೆ ರೋಟರಿ ಹಿಲ್ಸ್ ಮಾಜಿ ಅಧ್ಯಕ್ಷ ಪಿ.ಕೆ. ರವಿ, ವಲಯದ ಮಾಜಿ ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್, ಸೋಮ ವಾರಪೇಟೆ ಹಿಲ್ಸ್ ನ ಅಧ್ಯಕ್ಷ ಡಿ.ಪಿ. ರಮೇಶ್, ಕಾರ್ಯದರ್ಶಿ ಹೆಚ್.ಸಿ. ಲೋಕೇಶ್, ಸದಸ್ಯತ್ವ ನೋಂದಣಿ ರೋಟರಿ ಜಿಲ್ಲಾ ಸಮಿತಿ ಅಧ್ಯಕ್ಷ ಕ್ರೆಜ್ವಲ್ ಕೋಟ್ಸ್ ಮಾತನಾಡಿದರು.

ಈ ಸಂದರ್ಭ ರೋಟರಿ ವಲಯ 6 ರ 13ನೇ ರೋಟರಿ ಕ್ಲಬ್ ಆಗಿ ಮಲ್ಲೇಶ್ವರ ಆಲೂರು ಸಿದ್ದಾಪುರ ಕ್ಲಬ್‍ನ್ನು ಪ್ರಾರಂಭಿಸಿ, ನೂತನ ಅಧ್ಯಕ್ಷರನ್ನಾಗಿ ಹೆಚ್.ಇ. ತಮ್ಮಯ್ಯ ಮತ್ತು ಕಾರ್ಯ ದರ್ಶಿಯನ್ನಾಗಿ ಹೆಚ್.ಇ. ಸಂಪತ್ ಅವರಿಗೆ ಪದಗ್ರಹಣ ನೆರವೇರಿಸಲಾಯಿತು. 26 ಮಂದಿ ಮಲ್ಲೇಶ್ವರ ಕ್ಲಬ್‍ನ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.