ಮಡಿಕೇರಿ, ಜು. 1 : ಸರ್ಕಾರಿ ಶಾಲೆಗಳ ಉಳಿವಿಗಾಗಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. 9 ರಂದು ಜಿಲ್ಲಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವದೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಸ್. ಚೇತನ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸರ್ಕಾರಿ ಶಾಲೆಗಳ ಉಳಿವಿಗಾಗಿ ಮತ್ತು ಶಿಕ್ಷಕರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಮತ್ತು ಇಲಾಖೆಯ ಗಮನ ಸೆಳೆÉಯುವ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮತ್ತು ಇಲಾಖೆಯ ಅಧಿಕಾರಿಗಳು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದ ಅನ್ವಯ 2014 ಕ್ಕಿಂತ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರು ಪದವೀಧರರಾಗಿದ್ದರು ಕೂಡ 1 ರಿಂದ 5 ನೇ ತರಗತಿವರೆಗೆ ಮಾತ್ರ ಬೋಧಿಸಲು ಅರ್ಹರೆಂದು ತಿಳಿಸಿ, ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಶೇ. 50 ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಲ್ಪಡುವ ಸಾಧ್ಯತೆ ಇದ್ದು, ಇದರಿಂದಾಗಿ ಉದ್ಯೋಗವನ್ನೇ ಕಳೆÉದುಕೊಳ್ಳುವ ಭೀತಿ ಎದುರಾಗಿದೆಯೆಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಪ್ರಸಕ್ತ ಹೊರಡಿಸಿರುವ ಆದೇಶವನ್ನು ತಕ್ಷಣ ರದ್ದುಗೊಳಿಸಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದು, ಇದರಿಂದಾಗಿ ಹಲವಾರು ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ವರ್ಷದ ಒಟ್ಟು ಶೇಕಡಾವಾರು ಪರಿಗಣಿಸಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು.

ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ಗಳಲ್ಲಿರುವ ನ್ಯೂನ್ಯತೆಯನ್ನು ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅನುಪಾತವನ್ನು ಗುರುತಿಸುವಾಗ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಕರನ್ನು ಹೊರತು ಪಡಿಸಿ ಮಾಧ್ಯಮವಾರು ಮತ್ತು ಪ್ರಾದೇಶಿಕವಾರು ವಿಶೇಷ ನಿಯಮಗಳನ್ನು ರೂಪಿಸಿ ಹೆಚ್ಚುವರಿ ಪ್ರಕ್ರಿಯೆಗಳನ್ನು ಮಾಡಬೇಕು. ಆರನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಮುಖ್ಯ ಗುರುಗಳಿಗೆ ಪ್ರತಿ 5 ವರ್ಷಗಳ ಅಂತರದ ಬಡ್ತಿಗಳನ್ನು ನೀಡಬೇಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆಯ ವರೆಗೂ ಬಡ್ತಿಯನ್ನು

(ಮೊದಲ ಪುಟದಿಂದ) ಮುಂದುವರಿಸಬೇಕು ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆÀಗಳಲ್ಲು ಎಲ್‍ಕೆಜಿ ಮತ್ತು ಯುಕೆಜಿಯನ್ನು ಆರಂಭಿಸಬೇಕು. ಆ ಮೂಲಕ ಸಮಾಜದ ಬಡವರ್ಗದ ಮಕ್ಕಳು ಕೂಡ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಲು ಅವಕಾಶ ಮಾಡಿಕೊಡಬೇಕು. ಇದು ಜಾರಿಗೆ ಬಂದಲ್ಲಿ ಮುಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಖಾಸಗಿ ಶಾಲೆಗಳೆ ಇಲ್ಲದಂತಾಗುತ್ತದೆ ಎಂದು ಚೇತನ್ ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ರಾಜ್ಯದ ಸರ್ಕಾರಿ ನೌಕರರು ಸುಮಾರು 104 ಕೊಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಆದರೆ, ಸರ್ಕಾರ ಮಾತ್ರ ಸರಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅವರು ಇದೇ ಸಂದರ್ಭ ದೂರಿದರು.

ಸಂಘÀದ ಸೋಮವಾರಪೆÉೀಟೆ ತಾಲೂಕು ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆಗÀಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಸಕಾಲದಲ್ಲಿ ಒದಗಿಸುವಲ್ಲೂ ಸರ್ಕಾರ ವಿಫಲವಾಗಿದೆ. ಪರಿಣಾಮವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಹೊತ್ತೊಯ್ಯುವಂತಾಗಿದ್ದು, ಸರ್ಕಾರ ನಮ್ಮನ್ನು ಕೂಲಿ ಕಾರ್ಮಿಕರಿಗಿಂತಲು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯೆ ಆಯಾ ಶಾಲೆಗಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡುವಂತಾಗಬೇಕೆಂದು ಒತ್ತಾಯಿಸಿದರು.

ಸಂಘÀದ ವೀರಾಜಪೇಟೆ ತಾಲ್ಲೂಕು ಅಧ್ಯಕ್ಷ ಸುರೇಂದ್ರ ಅವರು ಮಾತನಾಡಿ, ಸರ್ಕಾರ ಮತ್ತು ಇಲಾಖೆಯ ಇತ್ತೀಚಿನ ಧೋರಣೆಗಳು ಶಿಕ್ಷಕರಲ್ಲಿ ನಿರಂಕುಶ ಆಡಳಿತವಿದೆಯೋ ಎಂಬ ಭಾವನೆ ಮೂಡಿಸಿದೆ. 2014ರ ಒಳಗೆ ನೇಮಕ ಮಾಡಲ್ಪಟ್ಟ ಶಿಕ್ಷಕರು ಕೇವಲ 5ನೇ ತರಗತಿಯವರೆಗೆ ಬೋಧಿಸಬೆÉೀಕು ಎಂಬ ಹೊಸ ನಿಯಮದಿಂದ ಮುಂದಿನ ವರ್ಷ ಜಿಲ್ಲೆಯಲ್ಲಿ ಶೇ.50 ರಷ್ಟು ಶಿಕ್ಷಕರು ಹೆಚ್ಚುವರಿಯಾಗಲಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯ ಶಿಕ್ಷಕರು ಇಲಾಖೆ ಸೂಚಿಸಿದ ಕಡೆಗೆ ಹೋಗಬೇಕಾದ ಇಲ್ಲವೆ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬರಬೆÉೀಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷೆ ಹಾಗೂ ರಾಜ್ಯ ಸಮಿತಿ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಜಿಲ್ಲಾ ಉಪಾಧ್ಯಕ್ಷೆ ಡಿ.ಕೆ.ರೇಖಾ ಕುಮಾರಿ, ಸಂಘÀಟನಾ ಕಾರ್ಯದರ್ಶಿ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎ.ವಿ.ಮಂಜುನಾಥ್ ಉಪಸ್ಥಿತರಿದ್ದರು.