ಶತಮಾನೋತ್ಸವದ ಹೊಸ್ತಿಲಲ್ಲಿರುವ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕುಶಾಲನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕಟ್ಟಡವೊಂದನ್ನು ನಿರ್ಮಿಸುವದರೊಂದಿಗೆ ಜಿಲ್ಲೆಯ ಸಹಕಾರಿ ವ್ಯವಸ್ಥೆಯಲ್ಲಿ ದಾಖಲೆ ನಿರ್ಮಿಸಿದೆ. ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿ ಅಂದಾಜು 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಂಘದ ಕಟ್ಟಡ 5 ಅಂತಸ್ತು ಗಳನ್ನು ಒಳಗೊಂಡಂತೆ ಕಟ್ಟಡದಲ್ಲಿ ಲಿಫ್ಟ್ ಸೌಲಭ್ಯ ಸೇರಿದಂತೆ ಉನ್ನತ ದರ್ಜೆಯ ಸಭಾ ಕೊಠಡಿಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮಾನದಂಡದಂತೆ ಭದ್ರತಾ ಕೊಠಡಿ, ಸಿಸಿ ಟಿವಿ, ವಿಶಾಲವಾದ ಬ್ಯಾಂಕಿಂಗ್ ಕೌಂಟರ್, ಗ್ರಾಹಕರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳು ಈ ಕಟ್ಟಡದಲ್ಲಿದೆ.
ಸುಮಾರು 3100 ಸದಸ್ಯರನ್ನು ಒಳಗೊಂಡ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ 98 ವರ್ಷಗಳಿಂದ ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. 1921ರಲ್ಲಿ ಪ್ರಾರಂಭವಾದ ಸಂಘ ಮುಳ್ಳುಸೋಗೆಯಲ್ಲಿ ಕಛೇರಿ ಹೊಂದಿತ್ತೆನ್ನಲಾಗಿದೆ. ಸಂಘವನ್ನು ನೂತನ ಯೋಜನೆಗಳೊಂದಿಗೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಲಾಭದ ಹಾದಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಂಘದ ಅಧ್ಯಕ್ಷ ಶರವಣಕುಮಾರ್ ಹೇಳುತ್ತಾರೆ.
ಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಮಾದಾಪಟ್ಟಣ, ಗೊಂದಿಬಸವನಹಳ್ಳಿ, ಬೊಳ್ಳೂರು, ಗುಡ್ಡೆಹೊಸೂರು, ಬಸವನಹಳ್ಳಿ ತನಕ ಕಾರ್ಯವ್ಯಾಪ್ತಿ ಹೊಂದಿರುವ ಸಂಘ ಹಿಂದಿನ ದಿನಗಳಲ್ಲಿ ಹೆಬ್ಬಾಲೆ, ಕಣಿವೆ, ಕೂಡಿಗೆ, ವಾಲ್ನೂರು, ನಂಜರಾಯಪಟ್ಟಣಗಳ ವ್ಯಾಪ್ತಿಯಲ್ಲಿ ಸದಸ್ಯತ್ವ ಹೊಂದಿರುವುದನ್ನು ಕಾಣಬಹುದು. 2000 ದ ನಂತರ ಸಂಘದ ಆಡಳಿತ ಕಛೇರಿ ಸಂಪೂರ್ಣ ಗಣಕೀಕೃತಗೊಂಡಿದ್ದು, ಇದೀಗ ಸಂಘವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೆ ಏರಿಸಲಾಗಿದೆ.
1921 ರಲ್ಲಿ ಮುಳ್ಳುಸೋಗೆಯಲ್ಲಿ ಪ್ರಾರಂಭಗೊಂಡ ಸಂಘ 1948 ರಲ್ಲಿ ಮುಳ್ಳುಸೋಗೆಯಿಂದ ಆಗಿನ ಪ್ರೆಸರ್ಪೇಟೆಯಾದ ಕುಶಾಲನಗರಕ್ಕೆ ಸ್ಥಳಾಂತರಗೊಂಡಿತು. ಅಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ದಿ.ಎಸ್.ಎನ್.ರಾಮಶೆಟ್ಟಿ ಮತ್ತಿತರ ಹಿರಿಯರ ಆಡಳಿತ ಮಂಡಳಿ ಅಂದಾಜು 22 ಸಾವಿರ ಪಾಲು ಬಂಡವಾಳದೊಂದಿಗೆ ರೂ. 10 ಸಾವಿರ ಠೇವಣಿ ಕ್ರೋಡೀಕರಿಸಿ ಸಂಘಕ್ಕೆ ಚಾಲನೆ ನೀಡಿರುವುದು ದಾಖಲೆ ಮೂಲಕ ಕಾಣಬಹುದು.
1983-84 ರಲ್ಲಿ ಅಂದಿನ ರಾಜ್ಯ ಸರಕಾರ ಸಾಲಮನ್ನಾ ಯೋಜನೆಯಲ್ಲಿ ಸದಸ್ಯರು ಸಂಘದಿಂದ ಪಡೆದಿದ್ದ ರು 6 ಲಕ್ಷಕ್ಕೂ ಹೆಚ್ಚಿನ ಸಾಲವನ್ನು ಮನ್ನಾ ಮಾಡಿ ಸಂಘವನ್ನು ಪುನಶ್ಚೇತನಗೊಳಿಸಲು ಬಹುದೊಡ್ಡ ಕೊಡುಗೆ ನೀಡಿದೆ ಎಂದರೆ ತಪ್ಪಾಗಲಾರದು. 1985ರಲ್ಲಿ ಆಗಿನ ಅಧ್ಯಕ್ಷರಾಗಿದ್ದ ವಕೀಲ ಟಿ. ಎಸ್. ನೇಮಿರಾಜು ಮತ್ತು ಆಡಳಿತ ಮಂಡಳಿ ಸಂಘಕ್ಕೆ ಜಾಗವನ್ನು ಪಡೆಯುವುದರೊಂದಿಗೆ 87 ರಲ್ಲಿ ನೂತನ ಕಟ್ಟಡ ಕೂಡ ಲೋಕಾರ್ಪಣೆಗೊಂಡಿತು. 1999 ರಲ್ಲಿ ಸಂಘದ ಅಧ್ಯಕ್ಷರಾದ ಟಿ. ಆರ್. ಶರವಣಕುಮಾರ್ ಮತ್ತು ಆಡಳಿತ ಮಂಡಳಿ ಬ್ಯಾಂಕಿನ ಸದಸ್ಯರುಗಳಿಗೆ ತ್ವರಿತ ಸೇವೆ ಒದಗಿ ಸುವ ಉದ್ದೇಶದೊಂದಿಗೆ ಸಂಘದ ವ್ಯವಹಾರವನ್ನು ಸಂಪೂರ್ಣ ಗಣಕೀ ಕರಣಗೊಳಿಸಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಹಿವಾಟು ನಡೆಸುವುದ ರೊಂದಿಗೆ ಅಧಿಕ ನಿವ್ವಳ ಲಾಭಗಳಿಸಿ ಸದಸ್ಯರಿಗೆ ಹೆಚ್ಚಿನ ಮೊತ್ತದ ಡಿವಿಡೆಂಟ್ ಕೂಡ ನೀಡಲು ಸಾಧ್ಯವಾಗುತ್ತಿದೆ. 2017-18ನೇ ಸಾಲಿನಲ್ಲಿ ಸಂಘ 1 ಕೋಟಿ 5 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದ್ದು ಇದು ಸಹಕಾರಿ ಸಂಘಗಳಲ್ಲಿ ದಾಖಲೆ ನಿರ್ಮಿಸಿದೆ ಎಂದರೆ ತಪ್ಪಾಗಲಾರದು. ಕಡು ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವಲ್ಲಿ ವಿದ್ಯಾರ್ಥಿ ವೇತನ ಯೋಜನೆ, ಸಾಲ ಪಡೆದ ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಹೊರೆಯಾಗದಂತೆ ಸಾಲದ ಹೊಂದಾಣಿಕೆಗೆ ಪ್ರತ್ಯೇಕನಿಧಿ ಸ್ಥಾಪನೆಗೆ ಕೂಡ ಸಂಘ ಚಿಂತನೆ ಹರಿಸಿದೆ. ಇತ್ತೀಚಿನ ದಿನಗಳಲ್ಲಿ ಕುಶಾಲನಗರ ಪಟ್ಟಣವಾಗಿ ಮಾರ್ಪಾಡಾಗುವುದ ರೊಂದಿಗೆ ಸಂಘದಲ್ಲಿ ರೈತ ಸದಸ್ಯರ ಸಂಖ್ಯೆ ವಿರಳವಾಗುತ್ತಿದೆ. 2.64 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ತಂತ್ರಜ್ಞಾನದ ಕಟ್ಟಡದಲ್ಲಿ ಆಡಳಿತ ಮಂಡಳಿ ಸಿಬ್ಬಂದಿಗಳಿಗೆ ಹಾಗೂ ಸದಸ್ಯರುಗಳಿಗೆ ಪೀಠೋಪಕರಣ, ನೂತನ ಕಂಪ್ಯೂಟರ್ ಅಳವಡಿಕೆ, ಲಿಫ್ಟ್ ಸೌಲಭ್ಯ, ಹವಾನಿಯಂತ್ರಿತ ವ್ಯವಸ್ಥೆ, ಭಾರತೀಯ ರಿಸರ್ವ್ ಬ್ಯಾಂಕಿನ ಮಾನದಂಡದಂತೆ ಸೂಕ್ತ ಭದ್ರತಾ ಕೊಠಡಿ ಅಲ್ಲದೆ ನೂತನ ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆ ಕೂಡ ಪ್ರಸಕ್ತ ಕಟ್ಟಡ ಒಳಗೊಂಡಿದೆ. ಹಳೆಯ ಕಟ್ಟಡದ ವಾರ್ಷಿಕ 20 ಲಕ್ಷಕ್ಕೂ ಅಧಿಕ ಬಾಡಿಗೆ ಆದಾಯದೊಂದಿಗೆ ನೂತನ ಕಟ್ಟಡದಲ್ಲಿ ಬಹುತೇಕ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುವುದು ಎಂದು ಅಧ್ಯಕ್ಷರಾದ ಟಿ. ಆರ್. ಶರವಣಕುಮಾರ್ ತಿಳಿಸಿದ್ದಾರೆ. ಲಾಭ ಗಳಿಕೆಯಲ್ಲಿ ಜಿಲ್ಲೆಯ ಕೆಲವೇ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಕುಶಾಲನಗರ ಸಂಘ ಸೇರಿಕೊಂಡಿದೆ ಎನ್ನುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ. ಸಂಘದಲ್ಲಿ ಇತ್ತೀಚಿನ ವರ್ಷಗಳಿಂದ ಪ್ರತಿ ತಿಂಗಳು ಆಂತರಿಕ ಲೆಕ್ಕ ಪರಿಶೋಧನಾ ವ್ಯವಸ್ಥೆ ಕೂಡ ನಡೆಸುವುದರೊಂದಿಗೆ 3 ತಿಂಗಳಿಗೊಮ್ಮೆ ವರದಿ ಕೂಡ ಸಲ್ಲಿಕೆ ಮಾಡಲಾಗುತ್ತಿದೆ. ರೈತರಿಗೆ ಸಂಘದ ಸಾಲ ಪಡೆಯುವುದು ಹಾಗೂ ಸಾಲ ವಸೂಲಾತಿ ಬಗ್ಗೆ ಮಾಹಿತಿ ನೀಡುವ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಹಿರಿಯ ಸಹಕಾರಿಗಳಿಂದ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸದಸ್ಯರ ಆರೋಗ್ಯ ಕಾಪಾಡಲು ವಿವಿಧ ನಿಧಿಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರನ್ನು ಹೆಚ್ಚಿಸುವುದು, ಸದಸ್ಯರುಗಳಿಗೆ ಹೆಚ್ಚಿನ ಮೊತ್ತದ ಸಾಲದ ಅನುಕೂಲತೆ ಕಲ್ಪಿಸುವುದು, ಸಾಲ ವಸೂಲಾತಿಗೆ ಸೂಕ್ತ ಕ್ರಮಕೈಗೊಳ್ಳುವುದು, ಇದರೊಂದಿಗೆ ಸಂಘದ ಸದಸ್ಯರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಚಿಂತಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಶರವಣಕುಮಾರ್ ತಿಳಿಸಿದ್ದಾರೆ. ಕಳೆದ ಸಾಲಿನಲ್ಲಿ ಸಂಘ 1 ಕೋಟಿ 5 ಲಕ್ಷ ರೂ.ಗಳ ನಿವ್ವಳ ಲಾಭ ಪಡೆದಿದೆ. ರೈತ, ಬಡ ಹಾಗೂ ಮಧ್ಯಮ ವರ್ಗದ ಜನರ ಸದಸ್ಯತ್ವ ಹೊಂದಿರುವ ಸಂಘ ಕಳೆದ ಸಾಲಿನಲ್ಲಿ 240 ಕೋಟಿ ರೂ.ಗಳ ವ್ಯವಹಾರ ನಡೆಸಿದೆ ಎಂದು ಮಾಹಿತಿ ಒದಗಿಸಿದ್ದಾರೆ
2021 ಕ್ಕೆ ಸಂಘದ ಶತಮಾನೋತ್ಸವ ಸಂದರ್ಭ ಸಂಘದ ಎಲ್ಲಾ ಹಿರಿಯ ಹಾಗೂ ಮಾಜಿ ಅಧ್ಯಕ್ಷರುಗಳನ್ನು ಸ್ಮರಿಸುವ ಕಾರ್ಯಕ್ರಮದೊಂದಿಗೆ ಗೌರವ ಸಲ್ಲಿಸಲಾಗುವುದು. ಸಂಘದ ಕಾರ್ಯವ್ಯಾಪ್ತಿಯನ್ನು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿಸಿ ಬ್ಯಾಂಕ್ನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿರುವ ಶರವಣಕುಮಾರ್, ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸೂಕ್ತ ಯೋಜನೆಯ ಪರಿಕಲ್ಪನೆ ಹಮ್ಮಿಕೊಳ್ಳಲಾಗಿದೆ.
ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರದೊಂದಿಗೆ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಾಜ್ಯದ ಇತರ ಸಂಘಗಳಿಗೆ ಮಾದರಿಯಾಗಿದೆ ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಂಘದ ನಿವ್ವಳ ಲಾಭದ ಮಾಹಿತಿ 2014-15 86,21,135 ರೂ., 2015-16 90,36,268 ರೂ., 2016-17 84,58,469 ರೂ., ಕಳೆದ ಎರಡು ವರ್ಷಗಳಿಂದ 1 ಕೋಟಿಗೂ ಹೆಚ್ಚು ನಿವ್ವಳ ಲಾಭಗಳಿಕೆ.
ಟಿ. ಆರ್. ಶರವಣಕುಮಾರ್ ಅವರು 1993 ರಲ್ಲಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದು 1999 ರಿಂದ 2005 ರ ತನಕ 6 ವರ್ಷಗಳ ಕಾಲ ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ನಂತರ 2015 ರಿಂದ ಮತ್ತೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿ. ಆರ್. ಶರವಣಕುಮಾರ್ ಸಂಘವನ್ನು ಸಂಪೂರ್ಣ ಕಂಪ್ಯೂಟರೀಕರಣ ಗೊಳಿಸುವುದರೊಂದಿಗೆ ಸಂಘಕ್ಕೆ ಸ್ವಂತ ಬಂಡವಾಳ ಸಂಗ್ರಹಿಸಲು ಪ್ರಯತ್ನ ನಡೆಸಿದ್ದಾರೆ. ಸಂಘ ಲಾಭದ ಹಾದಿಗೆ ಕೊಂಡೊಯ್ಯುವಲ್ಲಿ ನಿರಂತರ ಶ್ರಮದೊಂದಿಗೆ ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಯಶಸ್ಸು ಕಂಡಿದ್ದಾರೆ.
-ಚಂದ್ರಮೋಹನ್