*ಸಿದ್ದಾಪುರ, ಜು. 2: ವಾಲ್ನೂರು- ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು ಗ್ರಾಮಸ್ಥರು ಆತಂಕದಲ್ಲಿ ದಿನ ಕಳೆಯುವ ಪರಿಸ್ಥಿತಿ ಮುಂದುವರಿಯುತ್ತಿದೆ.

ಗ್ರಾಮದಲ್ಲಿರುವ ಕೃಷಿ ಪ್ರದೇಶಗಳು ಕಾಡಾನೆ ಹಾವಳಿಯಿಂದ ನಷ್ಟ ಉಂಟಾಗಿರುವದಲ್ಲದೇ ವಸತಿ ಪ್ರದೇಶಗಳತ್ತ, ವಾಸದ ಮನೆಗಳತ್ತ ಕಾಡಾನೆಗಳು ಧಾವಿಸಿ ಹಾನಿ ಮಾಡುತ್ತಿರುವ ಬೆಳವಣಿಗೆ ಕೂಡ ಗ್ರಾಮದಲ್ಲಿ ಕಳವಳವುಂಟು ಮಾಡಿದೆ.

ವಾಲ್ನೂರು ಗ್ರಾಮ, ನಿವಾಸಿ ಮಹಮದ್ ಬಾವಾ ಎಂಬವರ ವಾಲ್ನೂರಿನ ಕೃಷ್ಣಪುರಕ್ಕೆ ಹೋಗುವ ರಸ್ತೆಯ ಸಮೀಪ ನೂತನ, ಮನೆಯ ಮೇಲೆ ದಾಳಿ ಮಾಡಿರುವ ಒಂಟಿಸಲಗವೊಂದು ಅಪಾರ ಪ್ರಮಾಣದ ನಷ್ಟವನ್ನುಂಟುಮಾಡಿದೆ. ಒಂಟಿಸಲಗವು ಮನೆಯ ಮೇಲೆ ದಾಳಿ ಮಾಡುವ ಮುನ್ನ ಮಹಮದ್ ಬಾವಾ ಅವರಿಗೆ ಸೇರಿದ ಕಾಫಿ ತೋಟ ಮತ್ತ್ತು ತೋಟದೊಳಗೆ ಬೆಳೆದು ನಿಂತಿದ್ದ ತೆಂಗಿನ ಗಿಡಗಳನ್ನು ನಾಶ ಮಾಡಿದೆ.

ಈ ವ್ಯಾಪ್ತಿಯಲ್ಲಿ ತೋಟ ಹಾಗೂ ಕೃಷಿ ಗದ್ದೆಗಳ ಮೇಲೆ ನಿರಂತರ ದಾಳಿಯಾಗುತ್ತಿದ್ದು, ಅರಣ್ಯ ಇಲಾಖೆ ಇಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಹಿಡಿಯಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಕೆಲ ತಿಂಗಳುಗಳ ಹಿಂದೆ ಇಲ್ಲಿನ ಕಾಫಿ ಬೆಳೆಗಾರರಾದ ಮುಂಡ್ರುಮನೆ ಶಿವಕುಮಾರ್ ಅವರ ಮನೆಯ ಮುಂದೆ ಇರುವ ಎಲ್ಲಾ ತೆಂಗಿನ ಮರಗಳನ್ನು ಕಾಡಾನೆ ನಾಶ ಮಾಡಿದೆ. ಅದಕ್ಕೂ ಮೊದಲು ಇಲ್ಲಿನ ಕಾಫಿ ಬೆಳೆಗಾರರಾದ ಚೇಂದಂಡ ಜತ್ತ ವಿಜಯ ಅವರ ಮನೆಯ ಮುಂದೆ ನಿಲ್ಲಿಸದ್ದ ಕಾರನ್ನು ಇದೇ ಒಂಟಿಸಲಗ ಜಖಂಗೊಳಿಸಿತ್ತು.

ಕಾಡಾನೆ ಹಾವಳಿಯಿಂದ ಈ ವ್ಯಾಪ್ತಿಯ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹೋಗುವವರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತೋಟ ಕಾರ್ಮಿಕರು ಕೂಡ ಕಾಡಾನೆ ಹಾವಳಿ ಹಿನ್ನೆಲೆಯಲ್ಲಿ ತೋಟದೊಳಗೆ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಂಗಾರು ಮಳೆ ಪ್ರಾರಂಭ ವೇಳೆ ಕಾಫಿ ತೋಟಗಳಲ್ಲಿ ನಿರ್ವಹಿಸಬೇಕಾದ ಕೆಲಸವನ್ನು ಮುಂದುವರೆಸಲು ಅಸಾಧ್ಯ ಎಂದು ಬೆಳೆಗಾರರು ವಿಷಾಧ ವ್ಯಕ್ತಪಡಿಸಿದ್ದಾರೆ.

ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅನೀಫ್ ಈ ವ್ಯಾಪ್ತಿಯಲ್ಲಿ ಕಿರುಕುಳ ನೀಡುತ್ತಿರುವ ಒಂಟಿಸಲಗವನ್ನು ಶೀಘ್ರದಲ್ಲಿ ಅರಣ್ಯ ಇಲಾಖೆ ಬಂಧಿಸಿ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. -ಅಂಚೆಮನೆ ಸುಧಿ