ಸೋಮವಾರಪೇಟೆ, ಜು.1: ಭಾರತೀಯ ಜನತಾ ಪಾರ್ಟಿಯಿಂದ ಜಿಲ್ಲೆಯಲ್ಲಿ ಸಂಘಟನಾ ಪರ್ವ-ಸದಸ್ಯತ್ವ ಅಭಿಯಾನ ಕಾರ್ಯಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 1 ಲಕ್ಷ ಸದಸ್ಯತ್ವ ಹೊಂದುವ ಗುರಿ ಇದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ತಾಲೂಕು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ 43 ಸಾವಿರ ಸದಸ್ಯತ್ವ ಮಾಡಿಸಿದ್ದು, ಈ ಬಾರಿ 50 ಸಾವಿರಕ್ಕಿಂತಲೂ ಹೆಚ್ಚು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ 1ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.
ಅಭಿಯಾನದ ಜಿಲ್ಲಾ ಪ್ರಮುಖ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಪ್ರತಿ ಗ್ರಾಮ, ಮನೆಗಳಿಗೂ ತಲಪಿಸುವ ಮೂಲಕ ಅಭಿಯಾನದ ಗುರಿ ಸಾಧಿಸಬೇಕು. ಮೋದಿ ಸರ್ಕಾರದ ಸಾಧನೆ, ಕಾರ್ಯಕ್ರಮಗಳೂ ಸಹ ಸದಸ್ಯತ್ವ ಅಭಿಯಾನಕ್ಕೆ ವರದಾನವಾಗಿದೆ ಎಂದರು.
ಪ್ರಮುಖ ರಾಬಿನ್ ದೇವಯ್ಯ ಮಾತನಾಡಿ, ಬಲಿಷ್ಠ ಸಂಘಟನೆಯಿಂದ ಮಾತ್ರ ಪಕ್ಷಕ್ಕೆ ಶಕ್ತಿ ದೊರೆಯಲಿದ್ದು, ಈ ನಿಟ್ಟಿನಲ್ಲಿ ತಾ. 6ರಿಂದ ಆನ್ಲೈನ್ ಮೂಲಕ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಅಧ್ಯಕ್ಷ ಕೊಮಾರಪ್ಪ ವಹಿಸಿದ್ದು, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಅವರುಗಳು ಮಾತನಾಡಿದರು.
ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ತಾಲೂಕು ಕಾರ್ಯದರ್ಶಿ ವರದ, ಪ್ರಮುಖ ಎಸ್.ಬಿ. ಭರತ್ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.