ಸೋಮವಾರಪೇಟೆ, ಜು.1: ಬಸವಣ್ಣನವರ ತತ್ವಾದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಸಾಮಾಜಿಕ ಜಾಗೃತಿಗೆ ಮುಂದಡಿಯಿಡುವ ಸಲುವಾಗಿ, ಸಾಣೇಹಳ್ಳಿ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಜನಾಂದೋಲನ ಕಾರ್ಯಕ್ರಮ ಆಗಸ್ಟ್ 5ರಂದು ಮಡಿಕೇರಿಯಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ನಗರದ ಅಂಬೇಡ್ಕರ್ ಭವನದಲ್ಲಿ ನಿನ್ನೆ ನಡೆಯಿತು.

ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಮತ್ತೇ ಕಲ್ಯಾಣ ಜನಾಂದೋಲನ ಕಾರ್ಯಕ್ರಮದ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ಸಂಚಾಲಕರನ್ನಾಗಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಹಾಗೂ ಸಂಯೋಜಕರನ್ನಾಗಿ ಮೋನಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಇದರೊಂದಿಗೆ ಜನಾಂದೋಲನದ ಯಶಸ್ಸಿಗೆ ವಿವಿಧ ಸಮಿತಿ ರಚಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜನಾಂದೋಲನ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕಾರ್ಯಕ್ರಮಕ್ಕೆ ಪೂರಕವಾಗಿ ಸಮಿತಿ ರಚಿಸಿ ಆ ಮೂಲಕ ಜವಾಬ್ದಾರಿ ನೀಡಬೇಕು. ಜಿಲ್ಲೆಯ ಸಮಾಜಮುಖಿ ಸಂಘಟನೆಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆದರೆ ಯಶಸ್ಸು ಸಾಧ್ಯ ಎಂದು ಸಲಹೆ ನೀಡಿದರು.

ಆಂದೋಲನದ ಪ್ರಮುಖ ಮಹೇಶ್ ಚಟ್ನಳ್ಳಿ ಮಾತನಾಡಿ, ಬಸವಣ್ಣನವರ ಚಿಂತನೆಯನ್ನು ಸಕಾರಗೊಳಿಸಿ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿಯಾಗುತ್ತದೆ. ಎಲ್ಲರೂ ಒಂದಾಗಿ ಕಾರ್ಯಕ್ರಮ ಮಾಡುವ ಮೂಲಕ ಉದ್ದೇಶ ಈಡೇರಿಸಬೇಕು ಎಂದರು.

ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, 12 ನೇ ಶತಮಾನದಲ್ಲಿ ಮೂಡಿದ ಚಿಂತನೆಯನ್ನು 21 ನೇ ಶತಮಾನದಲ್ಲಿ ಸಕಾರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ನಗರ ಸಭೆ ಸದಸ್ಯ ಅಮೀನ್ ಮೋಹಿಸ್ಸಿನ್ ಮಾತನಾಡಿ, ಸುಸ್ಥಿರ ಸಮಾಜಕ್ಕೆ ಈ ರೀತಿಯ ಕಾರ್ಯಕ್ರಮ ರೂಪಿಸಿರುವದು ಶ್ಲಾಘನೀಯ ಎಂದು ಅಭಿಪ್ರಾಯಿಸಿದರು.

ಶರಣ್ಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಸರ್ವ ಧರ್ಮೀಯರು, ವಿವಿಧ ಸಂಘಟನೆಗಳನ್ನು ಒಂದುಗೂಡಿಸಿ ತಾ. 6 ರಂದು ಅಂಬೇಡ್ಕರ್ ಭವನದಲ್ಲಿ ಮತ್ತೊಂದು ಸಭೆ ನಡೆಸಲಾಗುವದು ಎಂದರು. ಸಭೆಯಲ್ಲಿ ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿಯ ಮುಖಂಡ ವೀರಭದ್ರಯ್ಯ, ಕಾರ್ಯಕ್ರಮದ ಪ್ರಮುಖ ಮೊಣ್ಣಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.