ಮಡಿಕೇರಿ, ಜು. 1: ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಬಂಕ್, ಒಂಟಿ ಮಹಿಳೆಯರಿರುವ ಮನೆಗಳಿಗೆ ನುಗ್ಗಿ ಹಣ, ಇನ್ನಿತರ ಸಾಮಗ್ರಿಗಳ ದರೋಡೆ ಮಾಡುತ್ತಿರುವ ಅಂತರ್ ಜಿಲ್ಲಾ ಡಕಾಯಿತರ ಜಾಲವನ್ನು ಬೇಧಿಸಿರುವ ಕೊಡಗು ಜಿಲ್ಲಾ ಪೊಲೀಸ್ ತಂಡ ಹತ್ತು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ದರೋಡೆಕೋರರನ್ನು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ.ಕಳೆದ ತಾ. 17ರಂದು ರಾತ್ರಿ ವೇಳೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದಲ್ಲಿರುವ ಎ.ಆರ್. ಸರ್ವಿಸ್ ಸ್ಟೇಷನ್‍ಗೆ ಎರಡು ಮೋಟಾರ್ ಸೈಕಲ್‍ಗಳಲ್ಲಿ ಬಂದವರು ಪೆಟ್ರೋಲ್ ಹಾಕಿಸುವ ನೆಪದಲ್ಲಿ ಮಾರಕಾಯುಧ ತೋರಿಸಿ ಬೆದರಿಸಿ ಹಣ, ಮೊಬೈಲ್ ದರೋಡೆ ಮಾಡಿ ಹೋಗಿದ್ದರು. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ.ನೇತೃತ್ವದಲ್ಲಿ (ಮೊದಲ ಪುಟದಿಂದ) ವಿಶೇಷ ಕಾರ್ಯಾಚರಣೆ ತಂಡ ರಚಿಸಿ ಪತ್ತೆ ಕಾರ್ಯ ಆರಂಭಿಸಿದ್ದು, ಘಟನೆ ನಡೆದ 13 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಲಾಗಿದೆ. ವಿಶೇಷವೆಂದರೆ ಆರೋಪಿಗಳು ಅಂತರ್ ಜಿಲ್ಲಾ ಡಕಾಯಿತರಾಗಿದ್ದು, ಅವರನ್ನು ಸೆರೆಹಿಡಿಯುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿದೆ.

ಆರೋಪಿಗಳು : ಪ್ರವೀಣ್ @ ಚುಕ್ಕಿ, ತಂದೆ ಪೌತಿ ಕರಿಯಪ್ಪ, ಪ್ರಾಯ 25 ವರ್ಷ, ಮೆಕಾನಿಕ್ ಕೆಲಸ, ವಾಸ : ಜಗದಾಪುರ ಗ್ರಾಮ, ಬಸವೇಶ್ವರ ದೇವಸ್ಥಾನದ ಹತ್ತಿರ ಕಾಲೋನಿ, ವಿರೂಪಾಕ್ಷಿಪುರ ಹೋಬಳಿ ಚನ್ನಪಟ್ಟಣ ತಾಲೂಕು, ರಾಮನಗರ ಜಿಲ್ಲೆ, ಗಣೇಶ್ ಬಿ., ತಂದೆ : ಪೌತಿ ಬಸವರಾಜು, ಪ್ರಾಯ : 30 ವರ್ಷ, ಕೂಲಿ ಕೆಲಸ, ವಾಸ : ಕೋಟೆ ಬೀದಿ, ಕೊಣನೂರು ಪಟ್ಟಣ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ, ಕುಮಾರ, ತಂದೆ ಪೌತಿ ಕೆಲ್ಲಯ್ಯ, ಪ್ರಾಯ : 33 ವರ್ಷ, ಚಾಲಕ ಕೆಲಸ, ವಾಸ ಹೌಸಿಂಗ್ ಬೋರ್ಡ್, ಆರ್.ಟಿ.ಓ. ಕಚೇರಿ ಬಳಿ, ಹುಣಸೂರು ಟೌನ್, ಅಭಿಷೇಕ್ ಆರ್.ಜೆ. @ ಅಭಿ, ತಂದೆ ಜಯಣ್ಣ, ಪ್ರಾಯ : 23 ವರ್ಷ, ಕೂಲಿ ಕೆಲಸ, ವಾಸ ಹೂಟಗಳ್ಳಿ ಹೌಸಿಂಗ್ ಬೋರ್ಡ್, ಕೃಷ್ಣ ಬೇಕರಿ ಹತ್ತಿರ, ಮುಖ್ಯ ರಸ್ತೆ, ಹೂಟಗಳ್ಳಿ, ಮೈಸೂರು ಆರೋಪಿಗಳಿಂದ ರೂ.2,50,000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಹಲವು ಪೆಟ್ರೋಲ್ ಬಂಕ್‍ಗಳ ಸರಣಿ ಸುಲಿಗೆ ಪ್ರಕರಣಗಳಲ್ಲಿ ಮತ್ತು ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವದು ಕಂಡು ಬಂದಿರುತ್ತದೆ. ಆರೋಪಿಗಳ ಪೈಕಿ ಪ್ರವೀಣ್ @ ಚುಕ್ಕಿ ಮತ್ತು ಗಣೇಶ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದವರು.

ಇದರೊಂದಿಗೆ ಹುಣಸೂರು ಪಟ್ಟಣದಲ್ಲಿ ಪಲ್ಸರ್ ಬೈಕ್ ಕಳ್ಳತನ, ಹುಣಸೂರಿನ ಗಾವಡಗೆರೆಯ ಪೆಟ್ರೋಲ್ ಬಂಕ್‍ನಲ್ಲಿ ಸುಲಿಗೆ ಪ್ರಕರಣ, ಕೆ.ಆರ್. ನಗರದ ಹಂಪಾಪುರದ ಪೆಟ್ರೋಲ್ ಬಂಕ್‍ನಲ್ಲಿ ಸುಲಿಗೆ ಪ್ರಕರಣ, ಕೆ.ಆರ್. ಪೇಟೆಯ ಸೋಮೇನಹಳ್ಳಿ ಪೆಟ್ರೋಲ್ ಬಂಕ್‍ನಲ್ಲಿ ಸುಲಿಗೆ ಪ್ರಕರಣ, ಕೆ.ಆರ್. ಸಾಗರದ ಕಟ್ಟೇರಿ ಹೊಸಳ್ಳಿ ಗ್ರಾಮದ ಮನೆಯಲ್ಲಿ ಸುಲಿಗೆ ಪ್ರಕರಣ, ಬೆಳಕವಾಡಿ ಗ್ರಾಮದ ಒಂಟಿ ಮನೆಯಲ್ಲಿ ಕಳ್ಳತನ ಪ್ರಕರಣ, ನಾಗಮಂಗಲದ ಚೀಣ್ಯದ ಬಳಿ ಕುರಿಗಳ ಕಳ್ಳತನ ಪ್ರಕರಣ, ಪಿರಿಯಾಪಟ್ಟಣ ಪಂಚವಳ್ಳಿ ಪೆಟ್ರೋಲ್ ಬಂಕ್‍ನಲ್ಲಿ ಸುಲಿಗೆ ಪ್ರಕರಣ, ಬೆಂಗಳೂರು ನಗರದಲ್ಲಿ ಮೋಟಾರ್ ಸೈಕಲ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ದೃಢಪಟ್ಟಿದೆ.

ಅಲ್ಲದೇ ಪ್ರಮುಖ ಆರೋಪಿ ಪ್ರವೀಣ (ಚುಕ್ಕಿ) ವಿರುದ್ಧ ಈ ಹಿಂದೆ ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ, ಮಹಾಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ಚೆನ್ನಪಟ್ಟಣದ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಒಂದು ಡಕಾಯಿತಿ ಪ್ರಕರಣ ಮತ್ತು ರಾಮನಗರ ಗ್ರಾಮಾಂತರ ಪೊಲೀಸರ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.

ಕಾರ್ಯಾಚರಣೆಯಲ್ಲಿ ಮುರುಳಿಧರ ಪಿ.ಕೆ., ಡಿ.ವೈ.ಎಸ್.ಪಿ., ಸೋಮವಾರಪೇಟೆ ಉಪವಿಭಾಗ ಮತ್ತು ತನಿಖಾಧಿಕಾರಿ ದಿನೇಶ್ ಕುಮಾರ್ ಬಿ.ಎಸ್., ಸಿ.ಪಿ.ಐ., ಕುಶಾಲನಗರ ಇದರ ನೇತೃತ್ವದಲ್ಲಿ ನಂದೀಶ್ ಕುಮಾರ್, ಪಿ.ಎಸ್.ಐ., ಕುಶಾಲನರ ಗ್ರಾಮಾಂತರ ಠಾಣೆ, ಕುಶಾಲನಗರ ಸದಾಶಿವ, ಪಿ.ಎಸ್.ಐ. ಕುಶಾಲನಗರ ಟೌನ್ (ಅಪರಾಧ) ಪ್ರೊ. ಪಿ.ಎಸ್.ಐ. ಅರ್ಚನ ಎಂ.ವಿ., ವಿಶೇಷ ಅಪರಾಧ ಪತ್ತೆ ತಂಡದ ಸಜಿ ಟಿ.ಎಸ್., ಸುಧೀರ್ ಕುಮಾರ್ ಕೆ.ಎಸ್., ದಯಾನಂದ, ಸಂದೇಶ್, ಜೋಸೆಫ್, ಮಂಜುನಾಥ ಎ., ರಮೇಶ್ ಎನ್.ಆರ್., ನಾಗರಾಜ್, ವೈ.ಯಸ್. ಪ್ರಕಾಶ್, ಸಂಪತ್ ರೈ, ಸುಧೀಶ್ ಕುಮಾರ್, ಡಿ.ಆರ್. ಅಭಿಷೇಕ್, ಮಣಿಕಂಠ, ಚಂದ್ರು, ವಿವೇಕ, ಚಾಲಕರಾದ ರಾಜು, ಸಿ.ಡಿ.ಆರ್. ವಿಭಾಗದ ರಾಜೇಶ್, ಗಿರೀಶ್, ಬೆರಳಚ್ಚು ವಿಭಾಗ ಜಯಕುಮಾರ್ ಹಾಗೂ ಜಿಲ್ಲಾ ಕಂಟ್ರೋಲ್ ರೋಸ್, ಧನಂಜಯ, ಜೋಷಿ, ಜಯಣ್ಣ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.