ಮೈಸೂರು, ಜು. 2: ಶಾಲೆಯಲ್ಲಿ ಸಿಗದ ಪಾಠ ಕೆ.ಎಂ. ಚಿಣ್ಣಪ್ಪ ಅವರಿಂದ ನನಗೆ ದೊರೆಯಿತು. ಬೆಂಗಳೂರಿನಿಂದ ನಾವು 20 ಜನರ ತಂಡವಾಗಿ ನಾಗರಹೊಳೆ ಪ್ರಕೃತಿ ಶಿಬಿರದಲ್ಲಿ ಭಾಗವಹಿಸಿದ್ದೆವು. ಮೊದಲ ಬಾರಿಗೆ ಚಿಣ್ಣಪ್ಪನವರ ಪರಿಚಯವಾಗಿತ್ತು. ಎರಡು ದಿನಗಳ ಶಿಬಿರದಲ್ಲಿ ಬೆಂಗಳೂರು ನಗರವಾಸಿಗಳನ್ನು ಪದೇ ಪದೇ ಬೈಯ್ಯುತ್ತಿದ್ದರು. ನಾನು ಸಂಸದ ಅನಂತ್‍ಕುಮಾರ್ ಪತ್ನಿ ಎಂಬದನ್ನು ಮರೆತು ನನ್ನನ್ನು ಬೈಯ್ದಿದ್ದರು. ಅದು ಎರಡು ದಿನಗಳ ಬೈಗುಳ ಶಿಬಿರವಾಗಿತ್ತು. ಅವರ ಬೈಗುಳ ದಿಂದಾಗಿ ನಮ್ಮ ಮೌಢ್ಯ ಅರ್ಥ ವಾಗಿತ್ತು. ನಾನು ವಿಜ್ಞಾನಿ, ಇಂಜಿನಿಯರ್ ಎಂಬ ಅಹಂಕಾರ ವನ್ನು ಚಿಣ್ಣಪ್ಪ ತೊಲಗಿಸಿದರು. ಅವರ ನೇರ, ನಿಷ್ಠುರ ಮಾತಿನಿಂದಾಗಿ ನಗರವಾಸಿಗಳ ‘ವಿಷಯ ದಾರಿದ್ರ್ಯ’ದ ಬಗ್ಗೆ ನಮಗೆಲ್ಲಾ ತಿಳಿಯಿತು ಎಂದು ಸಂಸದ ದಿ. ಅನಂತ್‍ಕುಮಾರ್ ಪತ್ನಿ ಸಮಾಜ ಸೇವಕಿ, ಅದಮ್ಯ ಚೇತನ ಪ್ರತಿಷ್ಠಾನದ ಮುಖ್ಯಸ್ಥೆ ತೇಜಸ್ವಿನಿ ಮುಕ್ತವಾಗಿ ಅಭಿಪ್ರಾಯಪಟ್ಟರು.
ವೈಲ್ಡ್ ಲೈಫ್ ಫಸ್ಟ್ ಮತ್ತು ಭಾರತಿ ಪ್ರಕಾಶನ, ಮೈಸೂರು ಆಶ್ರಯದಲ್ಲಿ ‘ಕಾಡಿನೊಳಗೊಂದು ಜೀವ’ ಪರಿಷ್ಕøತ ಆವೃತ್ತಿಯನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಹಣ ಸಂಪಾದನೆ, ಡೀಲಿಂಗು, ನಾಟಕೀಯ ಜೀವನದಲ್ಲಿರುವ ನಗರವಾಸಿಗಳಿಗೆ ಚಿಣ್ಣಪ್ಪ ಅವರ ಕಟು ಮಾತಿನ ಲಾಠಿ ಏಟು ಬೇಕಾಗಿದೆ ಎಂದರು.
ರೈಲ್ವೆ ಯೋಜನೆಗೆ ವಿರೋಧ - ಚಿಣ್ಣಪ್ಪ
ಕೆ.ಎಂ. ಚಿಣ್ಣಪ್ಪ ಅವರು ಮಾತನಾಡಿ, ಕೊಡಗಿಗೆ ಮಾರಕ ರೈಲು ಯೋಜನೆಗೆ ವಿರೋಧ ವ್ಯಕ್ತವಾದ ಸಂದರ್ಭ, ಅಂದಿನ ಸಂಸದ ಅನಂತ್‍ಕುಮಾರ್‍ರವರು ರೈಲ್ವೆ ಮಂತ್ರಿ ಪಿಯೂಸ್ ಘೋಯಲ್ ಅವರನ್ನು ತಮ್ಮ ನಿಯೋಗ ನವದೆಹಲಿಯಲ್ಲಿ ಭೇಟಿಯಾಗಲು ಸಹಕರಿಸಿದ್ದರು ಎಂದು ನೆನಪಿಸಿಕೊಂಡರು.
‘ಕಾಡಿನೊಳಗೊಂದು ಜೀವ’ ಕುರಿತು ನಿರೂಪಕ ಟಿ.ಎಸ್. ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ವೀರಾಜಪೇಟೆ ವೈದ್ಯ, ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಅವರು, ವನ್ಯಪ್ರೇಮಿ ಕೆ.ಎಂ. ಚಿಣ್ಣಪ್ಪ ಅವರ ಪುಸ್ತಕ ಕುರಿತು ಮಾತನಾಡಿದರು. ವನ್ಯಪ್ರೇಮಿ ಕೆ.ಎಂ. ಚಿಣ್ಣಪ್ಪ ಅವರೊಂದಿಗೆ ತನ್ನದು 50 ವರ್ಷದ ಒಡನಾಟ. ಅವರು ಛಲಬಿಡದ ತ್ರಿವಿಕ್ರಮನಂತೆ ಮುಂದಿನ ಪೀಳಿಗೆ ವನ್ಯಪ್ರೇಮಿಗಳಾಗಿ ರೂಪುಗೊಳ್ಳಲು ಕಾಡಿನೊಳಗೊಂದು ಜೀವ ಸ್ಪೂರ್ತಿ ಎಂದು ಡಾ. ಉಲ್ಲಾಸ್ ಕಾರಂತ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವನ್ಯಪ್ರೇಮಿ ಪ್ರವೀಣ್ ಭಾರ್ಗವ್, ನಿವೃತ್ತ ಐಎಫ್‍ಎಸ್ ಅಧಿಕಾರಿ ಎಸ್.ಕೆ. ರಾಮಲಿಂಗೇಗೌಡ, ಹಾಲಿ ಅರಣ್ಯ ಇಲಾಖೆ ಅಧಿಕಾರಿ ಗಳು, ಶ್ರೀಮಂಗಲದ ಬೋಸ್ ಮಾದಪ್ಪ, ಲಿಫ್ಟ್‍ನ ತಮ್ಮು ಪೂವಯ್ಯ, ನಾಪೋಕ್ಲು ಸತೀಶ್, ಬೆಂಗಳೂರು - ಮೈಸೂರಿನ ಹಿರಿಯ ಪತ್ರಕರ್ತರು, ಛಾಯಾಗ್ರಾಹಕರು ಒಳಗೊಂಡಂತೆ ಆಹ್ವಾನಿತರು ಪಾಲ್ಗೊಂಡಿದ್ದರು.
ಟಿ.ಎಲ್. ಶ್ರೀನಿವಾಸ್