ಮೂರ್ನಾಡು, ಜು. 1 : ರಸ್ತೆ ದುರಸ್ತಿ ಪಡಿಸುವಂತೆ ಮುತ್ತಾರುಮುಡಿ ಗ್ರಾಮಸ್ಥರು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಗ್ರಾಮದಿಂದ ಘೋಷಣೆಗಳನ್ನು ಕೂಗುತ್ತಾ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಎದುರು ಜಮಾಯಿಸಿ ರಸ್ತೆ ದುರಸ್ತಿಪಡಿಸುವಂತೆ ಪ್ರತಿಭಟಿಸಿ ಒತ್ತಾಯಿಸಿದರು. ಬಕ್ಕದಿಂದ ತೆಕ್ಕಡೆ, ಬೈಲೆ, ಮೇರ್ಕಜೆ ಮನೆಗಳಿಗೆ ತೆರಳುವ ರಸ್ತೆಯಲ್ಲಿ ಸುಮಾರು 45 ಕುಟುಂಬಗಳು ವಾಸವಿದ್ದು, ರಸ್ತೆ ಹದಗೆಟ್ಟಿದ್ದು, ಕಳೆದ ಹತ್ತು ವರ್ಷಗಳಿಂದ ರಸ್ತೆ ದುರಸ್ತಿಪಡಿಸಿಲ್ಲ. ಎರಡು ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮನೆಗಳಿಗೆ ತೆರಳಲು, ಶಾಲಾ ಮಕ್ಕಳು, ಪಾದಚರಿಗಳು ನಡೆದಾಡಲು ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 2 ಗಂಟೆಗಳ ಕಾಲ ಗ್ರಾಮ ಪಂಚಾಯಿತಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಉಪಾಧ್ಯಕ್ಷರ ಗೈರಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕಚೇರಿಗೆ ಬೀಗ ಜಡಿಯಲು ಮುಂದಾದರು. ಪೊಲೀಸರು ಮಧ್ಯೆ ಪ್ರವೇಶಿಸಿ ಬೀಗ ಜಡಿಯದಂತೆ ಮನವೊಲಿಸಿದರು. ಬಳಿಕ ಗ್ರಾಮಸ್ಥರು ಮನವಿಯನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡದೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿಯನ್ನು ಸಲ್ಲಿಸಿದರು. ತೆಕ್ಕಡೆ ಪೂರ್ಣಿಮಾ ಬಸಪ್ಪ, ರಮೇಶ್, ಪ್ರಸನ್ನ, ಮೆರ್ಕಜೆ ಮೋಹನ್, ಕರುಂಬಯ್ಯ, ಯೋಗೆಂದ್ರ, ಬೈಲೆ ಭೀಮಯ್ಯ, ನರೇಶ, ಅಶೋಕ, ಮಾದಪ್ಪ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.