ಕುಶಾಲನಗರ, ಜು. 2: ಕುಶಾಲನಗರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ಶಾಸಕ ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ಅವರು ಕುಶಾಲನಗರ ಕೆಎಸ್ ಆರ್‍ಟಿಸಿ ಬಸ್ ನಿಲ್ದಾಣದ ಆವರಣ ದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದರು.

1988 ರಲ್ಲಿ ನಿರ್ಮಾಣಗೊಂಡ ಸರಕಾರಿ ಬಸ್ ನಿಲ್ದಾಣ ಬಹುತೇಕ ಶಿಥಿಲಗೊಂಡಿದೆ. ದಿನನಿತ್ಯ 500 ಕ್ಕೂ ಅಧಿಕ ಬಸ್‍ಗಳು ಈ ನಿಲ್ದಾಣದ ಮೂಲಕ ಸಾಗುತ್ತಿದ್ದು ದಿನವೊಂದಕ್ಕೆ 25 ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದರು.

ಈ ನಿಟ್ಟಿನಲ್ಲಿ ಆದಷ್ಟು ಬೇಗ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಕ್ರಮಕೈಗೊಳ್ಳಲಾಗುವದು. ಕುಶಾಲನಗರ ಸಮೀಪ ಬಸವನಹಳ್ಳಿ ವ್ಯಾಪ್ತಿಯಲ್ಲಿ ಬಸ್ ಡಿಪೋ ಘಟಕ ನಿರ್ಮಾಣ ಕಾರ್ಯ ಕೂಡ ತಕ್ಷಣ ಪ್ರಾರಂಭಿಸಲು ಸರಕಾರದ ಗಮನ ಸೆಳೆಯಲಾಗುವದು ಎಂದು ಶಾಸಕರು ತಿಳಿಸಿದ್ದಾರೆ.

ಈ ಸಂದರ್ಭ ಕುಶಾಲನಗರ ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಜಿಪಂ ಸದಸ್ಯೆ ಮಂಜುಳಾ, ತಾಪಂ ಸದಸ್ಯ ಗಣೇಶ್, ಪಪಂ ಸದಸ್ಯರಾದ ರೂಪಾ ಉಮಾಶಂಕರ್, ಎಂ.ಡಿ. ಕೃಷ್ಣಪ್ಪ, ಪಿ.ಪಿ. ಸತ್ಯನಾರಾಯಣ್, ಗಣಿಪ್ರಸಾದ್, ಉಮಾಶಂಕರ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್ ಮತ್ತಿತರರು ಇದ್ದರು.