ವೀರಾಜಪೇಟೆ, ಜು. 2: ಕಳೆದ 26 ದಿನಗಳ ಹಿಂದೆ ಲಾರಿಯಲ್ಲಿ ಅಕ್ರಮ ಬೀಟಿ ಮರ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ನೋಬನ್ ಹಾಗೂ ಇತರ ಮೂರು ಮಂದಿ ಜಾಮೀನು ಅರ್ಜಿಯನ್ನು ಇಂದು ಅಪರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ. ರಮಾ ಅವರು ತಿರಸ್ಕರಿಸಿ ಆದೇಶ ನೀಡಿದ್ದಾರೆ.
ನೋಬನ್ ತಂಡದ ಪ್ರಕರಣ ಮೇಲ್ನೋಟಕ್ಕೆ ಕಂಡು ಬಂದ ಕಾರಣ ಈ ಪ್ರಕರಣದಲ್ಲಿ ಜಾಮೀನು ನೀಡಲು ಬರುವದಿಲ್ಲ ಎಂಬ ಕಾರಣಕ್ಕೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವದಾಗಿ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವೀರಾಜಪೇಟೆಯ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದಲ್ಲಿ ಮೊದಲು ನೋಬನ್ ತಂಡದ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಇಬ್ಬರು ವಕೀಲರು ಕಳೆದವಾರದ ಅವಧಿಯಲ್ಲಿ ನೋಬನ್ ತಂಡಕ್ಕೆ ಜಾಮೀನು ಕೋರಿ ವೀರಾಜಪೇಟೆಯ ಸಮುಚ್ಚಯ ನ್ಯಾಯಾಲಯದ ಅಪರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನಂತರ ಆದೇಶವನ್ನು ಜುಲೈ 2ಕ್ಕೆ ಕಾಯ್ದಿರಿಸಿಕೊಂಡಿದ್ದರು.
ತಾ, 6ರಂದು ಪೊನ್ನಂಪೇಟೆ ಯಲ್ಲಿ ಪೊಲೀಸರು ನೋಬನ್ ತಂಡದ ಅಕ್ರಮ ಬೀಟಿ ಮರ, ಲಾರಿ, ಕ್ರೇನ್ ಇತರ ವಾಹನಗಳು ಸೇರಿದಂತೆ ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ವಶ ಪಡಿಸಿಕೊಂಡು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.
ಕೆಲವು ದಿನಗಳ ನಂತರ ಅರಣ್ಯ ಇಲಾಖಾಧಿಕಾರಿಗಳು ಕುಟ್ಟದ ಬಳಿಯ ನೋಬನ್ ಮನೆಯ ಮೇಲೆ ದಾಳಿ ನಡೆಸಿ ಮರ ಕತ್ತರಿಸುವ ಲಕ್ಷಾಂತರ ರೂ ಬೆಲೆಬಾಳುವ ಯಂತ್ರ, ಬೀಟಿ ಮರದ ಕಟ್ ಸೈಜುಗಳನ್ನು ವಶ ಪಡಿಸಿಕೊಂಡಿದ್ದರು. ಇದರ ಜೊತೆಯಲ್ಲಿ ಪೊನ್ನಂಪೇಟೆ ಪೊಲೀಸರು ಪೊನ್ನಪ್ಪಸಂತೆಯ ಬಳಿಯ ಕಾಫಿತೋಟದಲ್ಲಿ ಬೀಟಿ ಮರ ಕಳವು ಮಾಡಿದ ಕುರಿತು ಪ್ರಕರಣ ದಾಖಲಿಸಿ ಇಲ್ಲಿನ ಸಮುಚ್ಚಯ ನ್ಯಾಯಾಲಯದ ಪ್ರಿನ್ಸಿಫಲ್ ಮುನ್ಸೀಫ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕರಿಸುವ ಮೊದಲೇ ಎಫ್.ಐ.ಆರ್. ಸಲ್ಲಿಸಿದ್ದರು.
ನೋಬನ್ ತಂಡದ ಹಿಂದಿನ ಕ್ರಿಮಿನಲ್ ಪ್ರಕರಣಗಳನ್ನು ಹೊರತು ಪಡಿಸಿದರೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹೊಸದಾಗಿ ಮೂರು ಎಫ್.ಐ.ಆರ್ ಗಳನ್ನು ದಾಖಲಿಸಿತ್ತು.