ನಾಪೆÉÇೀಕ್ಲು, ಜು. 1: ಕಾಲಕೆಟ್ಟೋಗಿದೆ. ಯಾರೂ, ಯಾರನ್ನೂ ನಂಬುವ ಹಾಗಿಲ್ಲ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಆದರೆ ಕಾಲಕೆಟ್ಟೋಗಿಲ್ಲ ಜನ ಮಾತ್ರ ಕೆಟ್ಟೋಗಿದ್ದಾರೆ ಎಂಬದಕ್ಕೆ ಇಲ್ಲಿದೆ ಸಾಕ್ಷಿ.

ಕೆಲವು ವರ್ಷಗಳಿಂದ ಕೊಡಗಿನಲ್ಲಿ ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಮೋಟಾರ್ ಬೈಕ್‍ನಲ್ಲಿ ಮನೆ, ಮನೆಗೆ ಭೇಟಿ ನೀಡುವ ಯುವಕರು ಸಾವಯವ ಗೊಬ್ಬರದ ಹೆಸರಿನಲ್ಲಿ ನಯವಾಗಿ ಮಾತನಾಡಿ ಬೆಳೆಗಾರರನ್ನು, ರೈತರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಅವರಿಂದ ಮುಂಗಡ ಹಣ ಪಡೆದು ಬುಕ್ಕಿಂಗ್ ಮಾಡಿಕೊಳ್ಳುತ್ತಿರುವದು ಎಲ್ಲರಿಗೂ ತಿಳಿದಿರುವ ಸಂಗತಿ. ಒಂದು ಗೊಬ್ಬರದ ಕಂಪನಿಯ ಡೀಲರ್ ಮಾತುಕೇಳಿ ಬೆಳೆಗಾರರೊಬ್ಬರು ಗೊಬ್ಬರಕ್ಕೆ ಹಣ ನೀಡಿ ಗೊಬ್ಬರ ಪಡೆದು ಮೋಸಹೋಗಿರುವ ಘಟನೆ ಸಮೀಪದ ಬಲ್ಲಮಾವಟಿ -ಪೇರೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬೆಳೆಗಾರ ನುಚ್ಚಿಮಣಿಯಂಡ ಬೆಳ್ಯಪ್ಪ ಮೈಸೂರಿನ ಆರ್ಗನಿಕ್ ಫರ್ಟಿಲೈಜರ್ಸ್ ಕಂಪನಿಯೊಂದರ ಕಿಸಾನ್ ಬಯೋ ಗೋಲ್ಡ್ ಎಂಬ ಹೆಸರಿನ 150 ಚೀಲ ಗೊಬ್ಬರವನ್ನು ಡೀಲರ್‍ನ ಮಾತಿನಂತೆ ತಾ. 30.3.19 ರಂದು 59,900 ರೂ. ಪಾವತಿಸಿ ಖರೀದಿಸಿದರು. ಈಗ ತೋಟಕ್ಕೆ ಗೊಬ್ಬರ ಹಾಕುವ ಸಲುವಾಗಿ ತೆರೆದು ನೋಡಿದಾಗ ಅದರಲ್ಲಿ ಮಣ್ಣು ಮತ್ತು ಕಲ್ಲಿನ ಮಿಶ್ರಣ ಕಂಡುಬಂದಿದೆ. ಅದರೊಂದಿಗೆ ಗೊಬ್ಬರದ ಚೀಲದ ತೂಕದಲ್ಲಿಯೂ 5-10 ಕೆ.ಜಿಯಷ್ಟು ವ್ಯತ್ಯಾಸ ಕಂಡು ಬಂದಿರುವದಾಗಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಬಗ್ಗೆ ಡೀಲರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಗೊಬ್ಬರದ ಕಂಪನಿಯಲ್ಲಿ ವಿಚಾರಿಸುವಂತೆ ತಿಳಿಸಿರುವದಾಗಿ ಬೆಳ್ಯಪ್ಪ ಹೇಳುತ್ತಾರೆ. ಇಂತವರ ವಿರುದ್ಧ ಸಂಬಂಧಿಸಿ ದವರು ಕಾನೂನು ಕ್ರಮಕೈಗೊಂಡು ಬೆಳೆಗಾರರನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

-ಪಿ.ವಿ.ಪ್ರಭಾಕರ್