ಕುಶಾಲನಗರ, ಜು. 2: ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ತಕ್ಷಣ ಬಸ್‍ಗಳ ನಿಲುಗಡೆಗೆ ಅವಕಾಶ ಕಲ್ಪಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ನಾಗರಿಕರಿಂದ ಮನವಿ ಸ್ವೀಕಾರ ಮತ್ತು ಕುಂದುಕೊರತೆ ಆಲಿಸಿದ ಶಾಸಕರು; ಪಟ್ಟಣದಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಕಾರ್ಯಯೋಜನೆ ರೂಪಿಸಲಾಗುವದು ಎಂದು ಭರವಸೆ ನೀಡಿದ್ದಾರೆ. ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ, ಮುಳ್ಳುಸೋಗೆ ವ್ಯಾಪ್ತಿಯ ನಾಗರಿಕರು ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿವ ನೀರು, ನಿವೇಶನ ಹಂಚಿಕೆ, ಇ -ಸ್ವತ್ತು ಸಮಸ್ಯೆ, ವಾಸ ದೃಢೀಕರಣ ಮತ್ತು ಪಂಚಾಯ್ತಿಯಲ್ಲಿ ಅಧಿಕಾರಿ ಸಿಬ್ಬಂದಿಗಳ ನಿರ್ಲಕ್ಷ್ಯ, ಮಧ್ಯವರ್ತಿಗಳ ಹಾವಳಿ ಬಗ್ಗೆ ತಮ್ಮ ಅಹವಾಲುಗಳನ್ನು ತೋಡಿಕೊಂಡರು.
ಗುಂಡೂರಾವ್ ಬಡಾವಣೆಯಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಗೊಂದಲದ ಹಿನ್ನೆಲೆಯಲ್ಲಿ ಆನ್‍ಲೈನ್‍ನಲ್ಲಿ ಬಂದಿರುವ ಫಲಾನುಭವಿಗಳ ಪಟ್ಟಿಯನ್ನು ಸದ್ಯಕ್ಕೆ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ ನಂತರ ಪಟ್ಟಿಯನ್ನು ಅಂತಿಮಗೊಳಿಸಲು ಕ್ರಮಕೈಗೊಳ್ಳ ಲಾಗುವದು ಎಂದರು.
ಪಟ್ಟಣ ಪಂಚಾಯಿತಿಯಲ್ಲಿ ಕೆಲವು ಸಿಬ್ಬಂದಿಗಳು, ಅಧಿಕಾರಿಗಳಿಂದ ನಾಗರಿಕರಿಗೆ ಕಿರುಕುಳ ಉಂಟಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ಅಧಿಕವಾಗಿದೆ. ಇ ಸ್ವತ್ತು ಪ್ರಮಾಣಪತ್ರ ಪಡೆಯಲು ಜನರು ಅಲೆದಾಡು ವಂತಾಗಿದೆ. ಅನಧಿಕೃತ ಹಾಗೂ ನಿಯಮ ಬಾಹಿರ ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿರುವ ಬಗ್ಗೆ ನಾಗರಿಕರು ಶಾಸಕರ ಗಮನಕ್ಕೆ ತಂದರು. ಕುಶಾಲನಗರ ಪಟ್ಟಣ ಹಾಗೂ ಕಾವೇರಿ ನದಿ ಸ್ವಚ್ಛತೆ ಹಿನ್ನೆಲೆ ಯಲ್ಲಿ ಸರಕಾರ ಕೈಗೆತ್ತಿಕೊಂಡಿರುವ ಬಹುಕೋಟಿ ಯೋಜನೆ ಅಪೂರ್ಣ ಗೊಂಡಿದ್ದು ಪಟ್ಟಣದ ಬಹುತೇಕ ಲಾಡ್ಜ್‍ಗಳು, ವಾಣಿಜ್ಯ ಕಟ್ಟಡಗಳಿಂದ ಶೌಚಾಲಯ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹರಿಸುತ್ತಿರುವದು, ಹಲವು ದೂರುಗಳನ್ನು ನಾಗರಿಕರು ಶಾಸಕರಿಗೆ ತಿಳಿಸಿ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಇನ್ನೂ ಕೆಲವೇ ದಿನಗಳಲ್ಲಿ ಯುಜಿಡಿ ಜಾಗದ ತಕರಾರು ಇತ್ಯರ್ಥಗೊಳ್ಳಲಿದ್ದು ಕಾಮಗಾರಿ ಪುನರಾರಂಭಗೊಳ್ಳಲಿದೆ ಎಂದರು. ಸಭೆಯಲ್ಲಿ ಹಲವು ಮಂದಿ ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿಯನ್ನು ನೀಡಿದರು. ಇದೇ ಸಂದರ್ಭ ವಾಜಪೇಯಿ ವಸತಿ ಯೋಜನೆ ಮತ್ತು ಡಾ. ಅಂಬೇಡ್ಕರ್ ಯೋಜನೆಯಡಿ ಯಲ್ಲಿ ಹೌಸಿಂಗ್ ಫಾರ್ ಆಲ್‍ನ ಮನೆ ಮಂಜೂರಾತಿ ಪತ್ರವನ್ನು ಶಾಸಕರು ವಿತರಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಎಲ್ಲ ದೂರುಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವದು ಎಂದು ಭರವಸೆ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಂಚಾಯ್ತಿ ಅಧಿಕಾರಿ ಸಿಬ್ಬಂದಿಗಳು ಸ್ಪಂದಿಸಬೇಕಾಗಿದೆ. ಆದಷ್ಟು ಬೇಗನೆ ಜನಪ್ರತಿನಿಧಿಗಳಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಸರಕಾರದೊಂದಿಗೆ ವ್ಯವಹರಿಸಲಾಗುವದು ಎಂದರು.
ತಾಲೂಕು ಮಟ್ಟದ ಕಛೇರಿಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವದು. ಕುಶಾಲನಗರ ದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ತಿಳಿಸಿದ ಅಪ್ಪಚ್ಚುರಂಜನ್, ಕೂಡಲೆ ತಾಲೂಕು ತಹಶೀಲ್ದಾರ್ ನೇಮಕ ಮಾಡಲು ಕ್ರಮ, ನೂತನ ತಾಲೂಕು ರಚನೆಯಾದ ಹಿನ್ನೆಲೆಯಲ್ಲಿ ಕುಶಾಲನಗರ ಕೇಂದ್ರವಾಗಿಟ್ಟುಕೊಂಡು ಎಲ್ಲಾ ಕಚೇರಿಗಳ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವದು. ಈ ಸಂಬಂಧ ಜಿಲ್ಲಾಡಳಿತದೊಂದಿಗೆ ವಿಶೇಷ ಸಭೆ ನಡೆಸಲಾಗುವದು ಎಂದರು.
ನೆನೆಗುದಿಗೆ ಬಿದ್ದಿರುವ ತಾವರೆಕೆರೆ ಅಭಿವೃದ್ಧಿಗೆ ನೀರಾವರಿ ಇಲಾಖೆ ಯೊಂದಿಗೆ ಚರ್ಚಿಸಲಾಗುವದು. ನದಿಗೆ ಕಲುಷಿತ ತ್ಯಾಜ್ಯ, ಶೌಚ ತ್ಯಾಜ್ಯಗಳನ್ನು ನೇರವಾಗಿ ಹರಿಸುವ ಕಟ್ಟಡ ಮಾಲೀಕರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಕನ್ನಡ ಸಂಸ್ಕøತಿ ಭವನಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಮಾಡುವದ ರೊಂದಿಗೆ ಸದ್ಯದಲ್ಲಿಯೇ ಲೋಕಾರ್ಪಣೆಗೆ ಕ್ರಮಕೈಗೊಳ್ಳಲಾಗು ವದು ಎಂದು ರಂಜನ್ ತಿಳಿಸಿದರು. ಇದೇ ಸಂದರ್ಭ ಶಾಸಕರು ಅಧಿಕಾರಿ ಗಳು ಮತ್ತು ಸಿಬ್ಬಂದಿಗಳ ಪ್ರತ್ಯೇಕ ಸಭೆ ನಡೆಸಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಪ್ರತಿಯೊಂದು ಅಹವಾಲಿಗೂ ಸ್ಪಂದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭ ಪ.ಪಂ. ಮುಖ್ಯಾಧಿಕಾರಿ ಸುಜಯ್‍ಕುಮಾರ್, ಇಂಜಿನಿಯರ್ ಶ್ರೀದೇವಿ, ಸದಸ್ಯರುಗಳು, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ನಾಗರಿಕರು ಇದ್ದರು.