ಕುಶಾಲನಗರ, ಜು. 2: ಕುಶಾಲನಗರ ನೂತನ ತಾಲೂಕು ರಚನೆ ಹಿನ್ನೆಲೆ ಜಿಲ್ಲಾಡಳಿತ ಪ್ರಾಥಮಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಕುಶಾಲನಗರ, ಸುಂಟಿಕೊಪ್ಪ, ಹಾರಂಗಿ ಹಿನ್ನೀರು ವ್ಯಾಪ್ತಿ, ಹರದೂರು ಗ್ರಾಪಂ ಅರ್ಧಭಾಗ, ನೆಲ್ಲಿಹುದಿಕೇರಿ, ಶಿರಂಗಾಲ ತನಕ ಕಾವೇರಿ ನದಿ ತೀರದ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಪ್ರಸಕ್ತ ನೂತನ ಕಾವೇರಿ ತಾಲೂಕು ರಚನೆ ಮಾಡಲು ಉದ್ದೇಶ ಹೊಂದಿದ್ದು, ಈ ಬಗ್ಗೆ ಈಗಾಗಲೇ ಸರಕಾರ ನೂತನ ಕಾವೇರಿ ತಾಲೂಕು ರಚನೆಗೆ ಹಸಿರು ನಿಶಾನೆ ಕಲ್ಪಿಸಿದೆ.

ಡಿವೈಎಸ್‍ಪಿ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಉಪಖಜಾನೆ, ಆರ್.ಎಂ.ಸಿ, ಲ್ಯಾಂಪ್ಸ್, ಕೇಂದ್ರ ಸರಕಾರಿ ಕಚೇರಿಗಳು ಸೇರಿದಂತೆ ಹಲವು ತಾಲೂಕು ಮಟ್ಟದ ಸರ್ಕಾರಿ ಶೈಕ್ಷಣಿಕ ಕೇಂದ್ರಗಳು, ತರಬೇತಿ ಕೇಂದ್ರಗಳು ಸೇರಿದಂತೆ ಒಟ್ಟು 14 ತಾಲೂಕು ಮಟ್ಟದ ಕಚೇರಿಗಳು ಆಡಳಿತಾತ್ಮಕ ಅನುಕೂಲಕ್ಕಾಗಿ ಕುಶಾಲನಗರದಲ್ಲಿ ಕಳೆದ ಕೆಲವು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿವೆ.

ಈ ಕಚೇರಿಯಲ್ಲಿರುವ ಅಧಿಕಾರಿ ಸಿಬ್ಬಂದಿಗಳು ಸೋಮವಾರಪೇಟೆ ತಾಲೂಕಿಗೆ ಒಳಪಟ್ಟಿದ್ದು ಕುಶಾಲನಗರದಿಂದ ಸ್ಥಳಾಂತರಕ್ಕೆ ಈಗಾಗಲೇ ಅಧಿಕಾರಿಗಳು ಪಟ್ಟಿ ತಯಾರಿಕೆಯಲ್ಲಿ ತೊಡಗಿದ್ದಾರೆ.

ಇತ್ತೀಚಿನ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೆದು ಸೋಮವಾರಪೇಟೆ ತಾಲೂಕಿಗೆ ಒಳಪಟ್ಟ ಕೇಂದ್ರ ಕಚೇರಿಗಳು ಕುಶಾಲನಗರ ವ್ಯಾಪ್ತಿಯಲ್ಲಿದ್ದು ಅವುಗಳನ್ನು ಸೋಮವಾರಪೇಟೆ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸಲು ಬೇಕಾದ ಕಟ್ಟಡಗಳು, ಸ್ಥಳಾವಕಾಶದ ಬಗ್ಗೆ ಪಟ್ಟಿ ತಯಾರಿಸುವಂತೆ ಸೂಚನೆ ನೀಡಲಾಗಿದೆ.

ಈ ಹಿನ್ನೆಲೆ ಸರಕಾರದಿಂದ ನೂತನ ತಾಲೂಕಿಗೆ ಅಧಿಸೂಚನೆ ಸದ್ಯದಲ್ಲಿಯೇ ಹೊರಬೀಳಲಿದ್ದು ಇದರ ನಡುವೆ ಗ್ರಾಮ ಮಟ್ಟದಲ್ಲಿ ಗ್ರಾಮಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹ ನಡೆಯಲಿದೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಗ್ರಾಮ, ಹೋಬಳಿ ಮಟ್ಟದಲ್ಲಿ ಕೂಡ ಸಭೆ ನಡೆಸುವದರೊಂದಿಗೆ ಪುನರ್‍ರಚನೆ ಕಾರ್ಯ ನಡೆಯಲಿದೆ. ಇದರೊಂದಿಗೆ ತಜ್ಞರ ಸಮಿತಿ ಈ ಪ್ರದೇಶಗಳಿಗೆ ಭೇಟಿ ನೀಡಿ ವರದಿಯನ್ನು ಪರಿಶೀಲಿಸಲಿದೆ. ಮಧ್ಯಂತರ ವರದಿಗಳನ್ನು ಈಗಾಗಲೆ ಉಪ ವಿಭಾಗ ಅಧಿಕಾರಿಗಳ ಕಚೇರಿಗೆ ರವಾನಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಮಾಹಿತಿ ತಿಳಿಸಿದರು.

ಸೋಮವಾರಪೇಟೆ ಕೇಂದ್ರದಲ್ಲಿ ಸ್ಥಳಾಂತರಗೊಳ್ಳುವ ಕಚೇರಿಗಳಿಗೆ ಸೂಕ್ತ ಕಟ್ಟಡ, ಸ್ಥಳಾವಕಾಶ ದೊರೆತ ಬೆನ್ನಲ್ಲೇ ಆಡಳಿತಾತ್ಮಕ ಅನುಮತಿ ದೊರೆತ ತಕ್ಷಣ ಕಚೇರಿಗಳ ಅಧಿಕಾರಿ, ಸಿಬ್ಬಂದಿಗಳು ಕುಶಾಲನಗರದಿಂದ ವಿಂಗಡಣೆಗೊಳ್ಳಲಿದ್ದಾರೆ. ತದನಂತರ ಈ ಸ್ಥಾನಕ್ಕೆ ಬದಲೀ ಅಧಿಕಾರಿ ಸಿಬ್ಬಂದಿಗಳ ವ್ಯವಸ್ಥೆಯನ್ನು ಸರಕಾರ ಕಲ್ಪಿಸಲಿದೆ. ಸೋಮವಾರಪೇಟೆಯಿಂದ ಕುಶಾಲನಗರ ನೂತನ ತಾಲೂಕಿಗೆ ಒಳಪಡುವ ಗ್ರಾಮ ಪಂಚಾಯಿತಿಗಳ ಬಗ್ಗೆ ಸದ್ಯದಲ್ಲಿಯೇ ಸರ್ವೆ ಕಾರ್ಯ ನಡೆಯಲಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಅಧಿಕಾರಿಗಳ ವಿಶೇಷ ಸಮಿತಿ ರಚನೆ ಮಾಡಿದೆ.

ನೂತನ ತಾಲೂಕು ಪ್ರಕ್ರಿಯೆ ಸಂಬಂಧ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಅಭಿಪ್ರಾಯ ಕ್ರೋಡೀಕರಿಸಲು ಸಭೆಗಳು ನಡೆಯಲಿವೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. - ಚಂದ್ರಮೋಹನ್