ಸುಂಟಿಕೊಪ್ಪ, ಜು. 2: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಆದೇಶದ ಮೇರೆಗೆ ಸುಂಟಿಕೊಪ್ಪ ನಗರದಲ್ಲಿ ಆಂಗ್ಲ ಭಾಷೆಯ ನಾಮಫಲಕವನ್ನು ಪಂಚಾಯಿತಿ ಸಿಬ್ಬಂದಿ ತೆರವುಗೊಳಿಸಿದರು.
ಸುಂಟಿಕೊಪ್ಪ ನಗರದಲ್ಲಿ ಕಾನೂನನ್ನು ಉಲ್ಲಂಘಿಸಿ ಹೊಟೇಲು ಅಂಗಡಿ ಮುಂಗಟ್ಟುಗಳಲ್ಲಿ ವಿವಿಧ ದೂರವಾಣಿ ಇಲಾಖೆಗಳ ಜಾಹೀರಾತು ಫಲಕ ಮತ್ತು ಇತರ ವಸತಿ ಗೃಹಗಳ ಮೇಲ್ಭಾಗ ಅಳವಡಿಸಲಾದ ಆಂಗ್ಲ ಭಾಷೆಯ ಬೃಹತ್ ಗಾತ್ರದ ನಾಮಫಲಕಗಳನ್ನು ತೆರವುಗೊಳಿಸಲಾಯಿತು.
ಗುಡ್ಡೆಹೊಸೂರು: ಗುಡ್ಡೆಹೊಸೂರು ಗ್ರಾ.ಪಂ.ವ್ಯಾಪ್ತಿಯ ಅಂಗಡಿ ಹೊಟೇಲ್‍ಗಳಲ್ಲಿ ಕನ್ನಡದಲ್ಲಿ ನಾಮ ಫಲಕ ಇಲ್ಲದ ಕಾರಣ ಹಲವು ನಾಮಫಲಕ ಗಳನ್ನು ಪಂಚಾಯಿತಿ ವತಿಯಿಂದ ತೆರವುಗೊಳಿಸಲಾಯಿತು. ಸರಕಾರದ ಆದೇಶದಂತೆ ಕನ್ನಡದಲ್ಲಿ ನಾಮಫಲಕ ಕಡ್ಡಾಯವಾಗಿದೆ. ಅಲ್ಲದೆ ಆಂಗ್ಲಭಾಷೆಯ ಜೊತೆಯಲ್ಲಿ ಅಂದರೆ ಶೇ.60 ಕನ್ನಡ ಮತ್ತು ಶೇ.40 ಆಂಗ್ಲಭಾಷೆ ಎಲ್ಲ ನಾಮಫಲಕದಲ್ಲಿ ಇರಬೇಕು ಎಂಬದು ಸರಕಾರದ ಆದೇಶವಿದೆ. ಪ್ರತಿ ನಾಮಫಲಕಗಳಲ್ಲಿ ಮೊದಲು ಕನ್ನಡ ನಂತರ ಆನ್ಯ ಭಾಷೆಗಳನ್ನು ಬಳಸುವಂತೆ ಸರಕಾರದ ಆದೇಶವಿದೆ. ಗುಡ್ಡೆಹೊಸೂರು ಪಿಡಿಓ ಶ್ಯಾಂ ಅವರು ಇಂದು ಕನ್ನಡೇತರ ನಾಮಫಲಕವನ್ನು ತೆರವುಗೊಳಿಸುವ ಕಾರ್ಯ ನಡೆಸಿದರು. ಹಲವು ಅಂಗಡಿ ಮಾಲೀಕರಿಗೆ ದಂಡ ಹಾಕಲಾಗಿದೆ.
ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಆಂಗ್ಲ ಭಾಷೆಯಲ್ಲಿ ರಾರಾಜಿಸುತ್ತಿದ್ದ ನಾಮಫಲಕಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಅವರ ತಂಡ ಇಂದು ಈ ವ್ಯಾಪ್ತಿಯ ಎಲ್ಲ ಕೈಗಾರಿಕಾ ಪ್ರದೇಶದಲ್ಲಿ ಅಳವಡಿಸಿದ್ದ ಆಂಗ್ಲಭಾಷೆ ಫಲಕಗಳನ್ನು ತೆರವುಗೊಳಿಸಿದರು. ತಾಲೂಕು ಕಾರ್ಯನಿರ್ವಹಣಾಧಿಕಾರಿ ಆದೇಶದಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯೋನ್ಮುಖರಾಗಿದ್ದಾರೆ.