ಸಿದ್ದಾಪುರ, ಜೂ. 30: ಹೊಸ್ಕೇರಿ ಗ್ರಾಮ ಪಂಚಾಯತಿ ಸದಸ್ಯ ಪ್ರಭು ಶೇಖರ್ ಹತ್ಯೆಗೆ ಯತ್ನ ನಂತರ ಆರೋಪಿ ನಿಗೂಢ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಅನೇಕ ಊಹಾಪೋಹ ಮಾತುಗಳು ಕೇಳಿ ಬರುತ್ತಿವೆ.ಹೊಸ್ಕೇರಿ ಗ್ರಾಮ ಪಂಚಾಯತಿ ಸದಸ್ಯ, ಭಾರತೀಯ ಜನತಾ ಪಕ್ಷ ಮುಖಂಡ ಅರೆಕಾಡು ನಿವಾಸಿ ಬಿ.ವೈ. ಪ್ರಭು ಶೇಖರ್‍ನನ್ನು ಅದೇ ಗ್ರಾಮ ನಿವಾಸಿ ದೋಲ್ಪಾಡಿ ಯಶ್ವಂತ್ ಶುಕ್ರವಾರ ಮಧ್ಯರಾತ್ರಿ ಕತ್ತಿಯಿಂದ ತಲೆಗೆ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದ. ಘಟನೆ ನಡೆದ ಬಳಿಕ ಯಶ್ವಂತ್ ಬೊಲೇರೋ ಜೀಪಿನಲ್ಲಿ ಪರಾರಿಯಾಗಿದ್ದ. ಈ ಸಂದರ್ಭ ಬೊಲೇರೋ ಜೀಪ್ ಅಭ್ಯತ್‍ಮಂಗಲ ಗ್ರಾಮದ ಊರಂಬಲ ಎಂಬಲ್ಲಿ ಕಂಡುಬಂದಿದ್ದು ಜೀಪ್ ಸಂಪೂರ್ಣ ಜಖಂಗೊಂಡಿತ್ತು. ಜೀಪಿನ ಟಯರ್ ಗಳು ಸೇರಿದಂತೆ ಸ್ಟೇರಿಂಗ್, ವ್ಹೀಲ್, ಸೀಟ್‍ಗಳನ್ನು ಕತ್ತಿಯಿಂದ ಕಡಿದು ಹಾನಿಗೊಳಿಸಲಾಗಿತ್ತು. ವಾಹನದ ಸುತ್ತಲ ಗಾಜನ್ನು ಪುಡಿಗೈಯ್ಯಲಾಗಿತ್ತು. ಜೀಪಿನ ಕೆಲ ಭಾಗಗಳಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದವು.
ಘಟನೆ ನಡೆದ ಅರೆಕಾಡು ಗ್ರಾಮವು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದ್ದು ಜೀಪ್ ನಿಲ್ಲಿಸಿ ಆರೋಪಿ ಯಶ್ ಕಾಣೆಯಾಗಿರುವ ಪ್ರದೇಶವು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಘಟನೆ ಎರಡೂ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವದರಿಂದ ತನಿಖೆ ಬಿರುಸುಗೊಂಡಿದೆ.
ಆರೋಪಿ ದೋಲ್ಪಾಡಿ ಯಶ್‍ನ ತಂದೆ ದೋಲ್ಪಾಡಿ ಬಾಲಸುಬ್ರಹ್ಮಣ್ಯ ರೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ವಿವಾದವಿದ್ದು ಕಳೆದ ಅನೇಕ ವರ್ಷಗಳಿಂದ ವ್ಯಾಜ್ಯ ಬಗೆಹರಿಯದೇ ಪರಸ್ಪರ ಕಲಹಗಳಾಗುತ್ತಿತ್ತು. ಗ್ರಾಮಸ್ಥರು ಕೂಡ ಈರ್ವರನ್ನು ಕರೆದು ಆಸ್ತಿ ವಿವಾದ ಬಗೆಹರಿಸಲು ಮುಂದಾಗಿದ್ದರೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಏತನ್ಮಧ್ಯೆ ಹೊಸ್ಕೇರಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸ್ಥಳೀಯ ಪ್ರಭುಶೇಖರ್ ಯಶ್ವಂತ್, ತಂದೆ ದೋಲ್ಪಾಡಿ ಬಾಲಬ್ರಹ್ಮಣ್ಯ ನೊಂದಿಗೆ ಆತ್ಮೀಯವಾಗಿ ಗುರುತಿಸಿ ಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಭುಶೇಖರ್ ಆಸ್ತಿ ವಿವಾದದಲ್ಲಿ ಮೂಗುತೂರಿ ವಿವಾದ ಉಂಟುಮಾಡುತ್ತಿದ್ದಾರೆ ಎಂದು ಯಶ್ ಹಲ್ಲೆ ನಡೆಸಿರಬಹುದು ಎನ್ನಲಾಗಿದೆ.
ಕಳೆದ ಅನೇಕ ವರ್ಷಗಳ ಹಿಂದೆ ಅರೆಕಾಡು ಗ್ರಾಮ ಧಂಗೆಯಿಂದ ಪ್ರಕ್ಷುಬ್ಧವಾಗಿದ್ದು ಇದೀಗ ಮತ್ತೆ ಅಹಿತಕರ ವಾತಾವರಣ ಸೃಷ್ಠಿಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮತ್ತೆ ಆತಂಕ ಮನೆ ಮಾುಡಿದೆ. ಘಟನೆ ನಡೆದ ಸ್ಥಳಕ್ಕೆ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹರೀಶ್, ಆಪ್ತ ಸಹಾಯಕ ನಂಗಾರು ಕಿರಣ್, ಮರಗೋಡು ಭಾರತೀಯ ಜನತಾ ಪಕ್ಷದ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್ ಸ್ಥಳಕ್ಕೆ ಭೇಟಿ ನೀಡಿದ್ದರು, ಮಡಿಕೇರಿ ಹಾಗೂ ಸಿದ್ದಾಪುರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು ತಲೆಮರೆಸಿ ಕೊಂಡಿರುವ ಆರೋಪಿ ಯಶ್ವÀಂತ್ ತಲಾಶೆಯಲ್ಲಿದ್ದಾರೆ. -ಸುಧಿ