ನಾಪೆÇೀಕ್ಲು, ಜೂ. 30: ಕಕ್ಕಬೆ-ವೀರಾಜಪೇಟೆ ಮುಖ್ಯ ರಸ್ತೆಯ ಒಂಬತ್ತನೇ ಮೈಲ್‍ನಿಂದ ಕೋಕೇರಿ ಗ್ರಾಮಕ್ಕಾಗಿ ಕೊಳಕೇರಿ ಪಟ್ಟಣವನ್ನು ತಲುಪಬಹುದು. ಹಾಗೆಯೇ ಬಾವಲಿ ಗ್ರಾಮವನ್ನು ಕೂಡ ಸಂಪರ್ಕಿಸಬಹುದು. ಈ ರಸ್ತೆಯ ಸ್ಥಿತಿಯೂ ಕೂಡ ದೇವರಿಗೆ ಪ್ರೀತಿ ಎಂಬಂತಿದೆ. ಡಾಮರು ರಸ್ತೆಯ ಪಳೆಯುಳಿಕೆಯನ್ನು ಮಾತ್ರ ಇಲ್ಲಿ ಕಾಣಬಹುದು. ರಸ್ತೆ ಹಾಳಾದ ಕಾರಣ ಇಲ್ಲಿ ಓಡಾಡುತ್ತಿದ್ದ ಒಂದೆರಡು ಬಸ್ ಕೂಡ ಈಗ ಸಂಚರಿಸುತ್ತಿಲ್ಲ. ಖಾಸಗಿ ವಾಹನಗಳಲ್ಲಿ, ಬಾಡಿಗೆ ವಾಹನಗಳಲ್ಲಿ ಜನ ತಮ್ಮ ದೈನಂದಿನ ಬದುಕನ್ನು ನಿಭಾಯಿಸುತ್ತಿದ್ದರು. ಆದರೆ ಈಗ ಅದಕ್ಕೂ ಸಂಕಷ್ಟ ಎದುರಾಗಿದೆ.ಬೇಸಿಗೆ ಕಾಲದಲ್ಲಿ ರಸ್ತೆಗೂ ನಮಗೂ ಯಾವದೇ ಸಂಬಂಧವಿಲ್ಲ ಎಂಬಂತಿದ್ದ ಲೋಕೋಪಯೋಗಿ ಇಲಾಖೆ ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆಯಲ್ಲಿ ಕೆಲವೆಡೆ ಮೋರಿ ಕಾಮಗಾರಿ ಆರಂಭಿಸಿರುವದೇ ಈಗ ಸಮಸ್ಯೆಗಳಿಗೆ ಕಾರಣವಾಗಿದೆ. ನಾಲ್ಕು ದಿನಗಳ ಹಿಂದೆ ರಸ್ತೆಯ ತಗ್ಗು ಪ್ರದೇಶದಲ್ಲಿ ಮೋರಿಗೆ ಪೈಪ್ ಅಳವಡಿಸಿ ಗುಂಡಿಗೆ ಕಲ್ಲು ತುಂಬಿಸುವ ಬದಲು ಕೆಸರು ಮಣ್ಣು ತಂಬಿಸಿದ ಪರಿಣಾಮ ವಾಹನಗಳು ಮೋರಿ ಗುಂಡಿಯಲ್ಲಿ ಸಿಲುಕಿಕೊಂಡು; ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕಾಲ್ನಡಿಗೆಯಲ್ಲಿ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಹಾಲಿನ ವಾಹನ ಗುಂಡಿಯಲ್ಲಿ ಸಿಲುಕಿಕೊಂಡ ಪರಿಣಾಮ ಗ್ರಾಮದ ಜನಕ್ಕೆ ಅಗತ್ಯವಾದ ಹಾಲು ದೊರೆಯಲಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮಸ್ಥರು.

ಕೋಕೇರಿ ಸರಕಾರಿ ಪ್ರಾಥಮಿಕ ಶಾಲೆಯ ಬಳಿ ನಿರ್ಮಿಸಲಾದ ಮೋರಿಯಲ್ಲಿ ಬೃಹದಾಕಾರದ ಗುಂಡಿ ನಿರ್ಮಾಣವಾಗಿದ್ದು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಅಪಾಯ ಎದುರಿಸುವಂತಾಗಿದೆ. ಕಾಮಗಾರಿ ನಡೆದು ನಾಲ್ಕು ದಿನಗಳಾದರೂ ಗುತ್ತಿಗೆದಾರನಾಗಲಿ, ಕಾಮಗಾರಿ ನಡೆಯುವ ಸಂದರ್ಭ ಇಂಜಿನಿಯರ್ ಆಗಲಿ ಇಲ್ಲಿಗೆ ಭೇಟಿ ನೀಡಲಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಕೂಡಲೇ ಹೊಂಡಕ್ಕೆ ಕಲ್ಲು ತುಂಬಿಸುವ ಮೂಲಕ ಸುಗಮ ವಾಹನ ಮತ್ತು ಜನ ಸಂಚಾರಕ್ಕೆ ಸಂಬಂಧಿಸಿದವರು ಅನುಕೂಲ ಕಲ್ಪಿಸುವದರ ಮೂಲಕ ಮುಂದಿನ ಅಪಾಯವನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ‘ಶಕ್ತಿ’ಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

-ಪಿ.ವಿ. ಪ್ರಭಾಕರ್