ಮಡಿಕೇರಿ, ಜೂ. 30: ಕರ್ನಾಟಕ ಸರಕಾರದಿಂದ ನೂತನ ಪೊನ್ನಂಪೇಟೆ ತಾಲೂಕು ಘೋಷಣೆಯಾಗಿರುವ ಮೇರೆಗೆ, ಮುಂದಿನ ಕ್ರಮಕ್ಕಾಗಿ ತಾ. 3 ರಂದು ಉಪವಿಭಾಗಾಧಿಕಾರಿ ಟಿ. ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಅಂದು ಪೂರ್ವಾಹ್ನ 11 ಗಂಟೆಗೆ ವೀರಾಜಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ಈ ಸಭೆ ನಡೆಯಲಿದೆ.ಪೊನ್ನಂಪೇಟೆ ತಾಲೂಕು ಕಚೇರಿಯ ರೂಪುರೇಷೆಯೊಂದಿಗೆ, ಪೂರ್ವಭಾವಿ ಕ್ರಮಕ್ಕಾಗಿ ಏಳು ಮಂದಿ ಅಧಿಕಾರಿಗಳ ಸಮಿತಿ ರಚಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.ಆ ಮೇರೆಗೆ ಏರ್ಪಡಿಸಿರುವ ಪೂರ್ವಭಾವಿ ಸಭೆಯಲ್ಲಿ ವೀರಾಜಪೇಟೆ ತಾಲೂಕಿನ ಜನಪ್ರತಿನಿಧಿಗಳು, ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಪದಾಧಿಕಾರಿಗಳು, ಸಂಬಂಧಪಟ್ಟ ಸಾರ್ವಜನಿಕರು ಭಾಗವಹಿಸಿ ಅಭಿಪ್ರಾಯ ನೀಡಬಹುದಾಗಿದೆ ಎಂದು ಹಿಂದಿನ ಹೋರಾಟ ಸಮಿತಿ ಅಧ್ಯಕ್ಷ ಪಿ.ಐ. ಪೂಣಚ್ಚ ತಿಳಿಸಿದ್ದಾರೆ.