ಕರಿಕೆ, ಜೂ. 30: ಮಾರಕ ರೋಗಗಳಾದ ಮಲೇರಿಯ, ಡೆಂಗಿ, ನಿಫಾ ನಿಯಂತ್ರಣ ಕುರಿತಾಗಿ ಸಾರ್ವಜನಿಕ ಜಾಥಾವನ್ನು ಇತ್ತೀಚೆಗೆ ಕರಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಪ್ರೌಢಶಾಲಾ ಆವರಣದಿಂದ ವಿದ್ಯಾರ್ಥಿಗಳು ಸುಮಾರು ಒಂದು ಕಿ.ಮೀ. ದೂರ ಜಾಥಾ ನಡೆಸಿದರು. ಇದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಬಳಿ ಸಮಾಪನಗೊಂಡಿತ್ತು.
ನಂತರ ಮಾತನಾಡಿದ ಭಾಗಮಂಡಲ ವೈದ್ಯಾಧಿಕಾರಿ ಡಾ. ಪೊನ್ನಮ್ಮ ಇದೀಗ ಮಳೆ ಹಾಗೂ ಬಿಸಿಲು ಮಿಶ್ರಿತ ವಾತಾವರಣವಿದ್ದು, ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವದಲ್ಲದೆ ಈ ಭಾಗದಲ್ಲಿ ರಬ್ಬರ್ ಹೆಚ್ಚಾಗಿ ಬೆಳೆಯುವದರಿಂದ ಅದರ ಚಿಪ್ಪಿನಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನೆಯಾಗುವ ಅವಕಾಶವಿರುತ್ತದೆ. ಚಿಪ್ಪನ್ನು ಮಗುಚಿ ಇಡಬೇಕು ಅಲ್ಲದೆ ಹಳೆ ಟಯರ್, ಪಾತ್ರೆಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ನಮ್ಮ ಗ್ರಾಮವನ್ನು ರೋಗ ಮುಕ್ತವಾಗಿಸುವ ನಿಟ್ಟಿನಲ್ಲಿ ವೈದ್ಯರ ಶ್ರಮ ಮಾತ್ರವಲ್ಲ ಸಾರ್ವಜನಿಕರು ಕೂಡ ಕೈ ಜೋಡಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಕಿರಿಯ ಆರೋಗ್ಯ ಸಹಾಯಕರು, ಜಿ.ಪಂ. ಸದಸ್ಯೆ ಕವಿತಾ, ಗ್ರಾಮ ಪಂಚಾಯತಿ ಸದಸ್ಯರು ಪಾಲ್ಗೊಂಡಿದ್ದರು. ಕರಿಕೆ ಉಪಠಾಣಾ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. - ಹೊದ್ದೆಟ್ಟಿ ಸುಧೀರ್