ಮಡಿಕೇರಿ, ಜೂ. 30: ವೀರಾಜಪೇಟೆಯ ಸರ್ವೋದಯ ಶಿಕ್ಷಣ ಸಂಸ್ಥೆಯಿಂದ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳ ಪ್ರಸಕ್ತ ರೀತಿಯ ಶಿಕ್ಷಣದ ಬಗ್ಗೆ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕಾರ್ಯಾಗಾರವನ್ನು ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಏರ್ಪಡಿಸಲಾಗಿತ್ತು.

ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಎಸ್. ಮಚ್ಚಾಡೋ ಅವರು ಅಧ್ಯಕ್ಷತೆ ವಹಿಸಿದ್ದರು.

ಉದ್ಘಾಟನೆ ನೆರವೇರಿಸಿದ ಅನುದಾನ ರಹಿತ ಶಾಲಾ ಒಕ್ಕೂಟದ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಅವರು, ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಈ ರೀತಿಯ ಕಾರ್ಯಾಗಾರ ಏರ್ಪಡಿಸಿದ ಬಗ್ಗೆ ಪ್ರಶಂಸಿಸಿ ಶಿಕ್ಷಕರು ಇದರ ಸದುಪಯೋಗ ಪಡೆದು ಅದನ್ನು ಅಳವಡಿಸಿಕೊಳ್ಳುವಂತೆ ಹೇಳಿದರು.

ಮಚ್ಚಾಡೋ ಅವರು ವಿದ್ಯಾರ್ಥಿಗಳು ತಾವು ಕಲಿತ ವಿಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಶಿಕ್ಷಣದ ಉದ್ದೇಶವು ಅಂಕ ಪಡೆಯುವದಕ್ಕಷ್ಟೇ ಆಗಿರಬಾರದು ಎಂದು ಹೇಳಿದರು.

ಕಾರ್ಯಾಗಾರವನ್ನು ಸರ್ವೋದಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ನೆರವೇರಿಸಿದ್ದು, ಪ್ರಾಯೋಜಕತ್ವವನ್ನು ಜೆ.ಎ. ಮತ್ತು ಸನ್ಸ್ ವೀರಾಜಪೇಟೆಯವರು ವಹಿಸಿದ್ದರು.