ಕುಶಾಲನಗರ, ಜೂ. 30: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಇದೀಗ ತನಿಖೆಯ ಹಾದಿಯಲ್ಲಿದ್ದರೆ, ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ನಡೆದ ಹಲವು ಬಹುಕೋಟಿ ವಂಚನೆ ಪ್ರಕರಣಗಳು ಮಾತ್ರ ಇನ್ನೂ ಇತ್ಯರ್ಥಗೊಳ್ಳದೆ ತನಿಖೆ ಸಂಪೂರ್ಣ ನೆನೆಗುದಿಗೆ ಬೀಳುವದರೊಂದಿಗೆ ಹಣ ಹೂಡಿಕೆ ಮಾಡಿದ ಜನರು ತಮ್ಮ ಹಣಕ್ಕಾಗಿ ಶಬರಿಯಂತೆ ಕಾಯುತ್ತಿರುವ ಪರಿ ಎಲ್ಲೆಡೆ ಕಾಣಬಹುದು.

2009 ರಿಂದ 2012 ರ ತನಕ ಕುಶಾಲನಗರ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ಸುಮಾರು 5 ಹಣಕಾಸು ಸಂಸ್ಥೆಗಳು ಕೋಟಿಗಟ್ಟಲೆ ರೂ. ವಂಚನೆ ಮಾಡಿರುವ ಪ್ರಕರಣವನ್ನು ‘ಶಕ್ತಿ’ ಬೆಳಕಿಗೆ ತರುವ ಮೂಲಕ ವಂಚನೆಯ ಬಗ್ಗೆ ತನಿಖಾ ತಂಡ ರಚನೆಯಾಗುವದರೊಂದಿಗೆ ಬಹುತೇಕ ವಂಚಕರು ಜಿಲ್ಲೆಯಿಂದ ಕಾಲ್ಕೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು.

2009 ರಲ್ಲಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಹಗರಣ, 2010 ರಲ್ಲಿ ಬಿಜಾರೆ, ಹಗರಣ, 2011 ರಲ್ಲಿ ಗ್ರೀನ್ ಬಡ್ಸ್, ಹಿಂದೂಸ್ತಾನ್ ಇನ್ಪ್ರಾಕಾನ್, 2012 ರಲ್ಲಿ ಜಿಟಿಎಸ್ ಹಣಕಾಸು ಸಂಸ್ಥೆ ಸೇರಿದಂತೆ ಹಲವು ರಾಷ್ಟ್ರೀಯ, ಅಂತರ್‍ರಾಷ್ಟ್ರೀಯ ಗೋಲ್‍ಮಾಲ್ ಸಂಸ್ಥೆಗಳು ಕೊಡಗು ಜಿಲ್ಲೆ ಮತ್ತು ನೆರೆಜಿಲ್ಲೆಗಳ 30 ಸಾವಿರಕ್ಕೂ ಅಧಿಕ ಜನರಿಗೆ ವಂಚನೆ ಮಾಡುವದರೊಂದಿಗೆ ಸಂಸ್ಥೆಗಳು ಸುಮಾರು ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹಿಸಿ ಪರಾರಿಯಾದ ನೆನಪು ಇನ್ನೂ ಮಾಸಿಲ್ಲ.

ಕಾರುಣ್ಯ ಚಾರಿಟೇಬಲ್ ಸಂಸ್ಥೆ ಸುಮಾರು ಜಿಲ್ಲೆ, ನೆರೆ ಜಿಲ್ಲೆಯ 16 ಸಾವಿರ ಮಹಿಳೆಯರಿಗೆ ರೂ. 21 ಕೋಟಿಗೂ ಅಧಿಕ ಹಣ ವಂಚನೆ ಮಾಡಿರುವ ಪ್ರಕರಣ ಬಗ್ಗೆ ತನಿಖೆ ಸಿಒಡಿಗೂ ಹಸ್ತಾಂತರವಾಗು ವದರೊಂದಿಗೆ ಸಂಸ್ಥೆಯ ಹಲವರು ಜೈಲು ಪಾಲಾಗಿದ್ದರು.

ಆದರೆ ತನಿಖೆಯ ಹಂತ ಯಾವ ಮಟ್ಟದಲ್ಲಿದೆ ಅನ್ನುವುದು ಇನ್ನೂ ತಿಳಿದುಬಂದಿಲ್ಲ. ಈ ಸಂಸ್ಥೆಯ ವಂಚನೆ ಪ್ರಕರಣ ತನಿಖಾ ಹಂತದಲ್ಲಿದ್ದ ಬೆನ್ನಲ್ಲೇ ಮತ್ತೊಂದು ಹೊಸ ವಂಚಕ ಸಂಸ್ಥೆ ಹುಟ್ಟುವದರೊಂದಿಗೆ ಬಿಜಾರೆ ಹಣಕಾಸು ಸಂಸ್ಥೆ ನಂತರ ಗ್ರೀನ್‍ಬಡ್ಸ್ ತದನಂತರ ಹಿಂದೂಸ್ಥಾನ ಇನ್ಪ್ರಾಕಾನ್ ಹೀಗೆ ಹಲವು ಹಣಕಾಸು ಸಂಸ್ಥೆಗಳು ಅಲ್ಲಲ್ಲಿ ತಲೆ ಎತ್ತುವದರೊಂದಿಗೆ ಸ್ಥಳೀಯರ ಕೋಟಿಗಟ್ಟಲೆ ಬಂಡವಾಳವನ್ನು ಸಂಗ್ರಹಿಸಿ ವಂಚನೆ ಮಾಡಿರುವದು ಇನ್ನೂ ಹಚ್ಚಹಸಿರಾಗಿದೆ.

ಈ ಎಲ್ಲಾ ವಂಚನೆ ಪ್ರಕರಣಗಳನ್ನು ಶಕ್ತಿಯಲ್ಲಿ ದಿನನಿತ್ಯ ತನಿಖಾ ವರದಿ ಪ್ರಕಟಿಸುವದರೊಂದಿಗೆ ಜನರಿಗೆ ಅರಿವು ಮೂಡಿಸಿದರೂ ಇದಕ್ಕೆ ತಲೆ ಕೆಡೆಸಿಕೊಳ್ಳದೆ ಮತ್ತೊಂದು ಬಹುಕೋಟಿ ವಂಚನೆ ಕೂಡ ಕೊಡಗು ಜಿಲ್ಲೆಯಲ್ಲಿ ನಡೆದಿದ್ದು ಇನ್ನೂ ರೋಚಕವಾಗಿತ್ತು.

2012 ರಲ್ಲಿ ಸಿವಿ ಗ್ಲೋಬಲ್ ಟ್ರೇಡ್ ಸೊಲ್ಯೂಷನ್ ಪ್ರೈ.ಲಿ. ಸಂಸ್ಥೆ ನೆರೆಯ ಕಾಸರಗೋಡಿನಲ್ಲಿ ಕೇಂದ್ರ ಕಛೇರಿ ಹೊಂದುವ ಮೂಲಕ ಜಿಲ್ಲೆಯ ಜನರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಷೇರುದಾರರು 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದಲ್ಲಿ ತಿಂಗಳಿಗೆ 9 ಸಾವಿರ ರೂ.ಗಳಂತೆ ಬಡ್ಡಿ ನೀಡುವ ಬಗ್ಗೆ ನಂಬಿಸಿ ಕಾಸರಗೋಡಿನ ಖಾಸಗಿ ಬ್ಯಾಂಕ್ ಒಂದರ ಪೋಸ್ಟ್ ಡೇಟೆಡ್ ಚೆಕ್ ಅನ್ನು ಷೇರುದಾರರಿಗೆ ಒದಗಿಸಿದ್ದರು. ಬಡ್ಡಿ ಆಮಿಷಕ್ಕೆ ಬಲಿಯಾದ ಮಂದಿ 1 ಲಕ್ಷದಿಂದ 1 ಕೋಟಿ ತನಕ ಸಂಸ್ಥೆಯಲ್ಲಿ ಷೇರನ್ನು ಹೂಡಿದ ದಾಖಲೆಗಳು ಶಕ್ತಿಗೆ ಲಭಿಸಿತ್ತು. ಪ್ರತಿಯೊಬ್ಬ ಹೂಡಿಕೆದಾರರಿಗೆ ರೂ. 50, ರೂ. 100ರ ಮುಖಬೆಲೆಯ ಸಾವಿರಾರು ಸ್ಟ್ಯಾಂಪ್ ಪೇಪರ್ ಹಾಗೂ ಚೆಕ್‍ಗಳನ್ನು ಜಿಟಿಎಸ್ ಹಣಕಾಸು ಸಂಸ್ಥೆ ಒದಗಿಸಿತ್ತು. ಕ್ರಮೇಣ ದುಬೈ ಮೂಲದ ಈ ಹಣಕಾಸು ಸಂಸ್ಥೆ ಕೋಟಿಗಟ್ಟಲೆ ಹಣದೊಂದಿಗೆ ಜನರಿಗೆ ಪಂಗನಾಮ ಹಾಕಿರುವದು ಇನ್ನೂ ತನಿಖಾ ಹಂತದಲ್ಲಿಯೇ ಇದೆ.

ಈ ಬಗ್ಗೆ ಕುಶಾಲನಗರದ ಉದ್ಯಮಿಗಳಾದ ಸನ್ನಿ ಜೋಸೆಫ್, ಲಾರೆನ್ಸ್ ಎಂಬವರುಗಳು ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 2012 ರ ಜನವರಿಯಲ್ಲಿ ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು. (ಎಫ್‍ಐಆರ್ ಸಂಖ್ಯೆ 47/11, 48/11, 49/11) ಆದರೆ ಇದುವರೆಗೆ ವಂಚನೆಗೊಳಗಾದ ಮಂದಿಗೆ ಇನ್ನೂ ನ್ಯಾಯ ದೊರಕಿಲ್ಲ. ಆದರೆ ಕುಶಾಲನಗರ, ಸಿದ್ದಾಪುರ ವ್ಯಾಪ್ತಿಯಲ್ಲಿ ಈ ದಂಧೆಯ ದಲ್ಲಾಳಿಗಳಾಗಿ ಕೆಲಸ ನಿರ್ವಹಿಸಿದ ಕೆಲವು ಮಂದಿ ಮಾತ್ರ ಕೋಟ್ಯಾಧೀಶರಾಗಿ ಪರಿವರ್ತನೆ ಗೊಂಡು ಮೌನ ಪ್ರಾರ್ಥನೆ ಮಾಡುತ್ತಿರುವದು ಎಲ್ಲರಿಗೂ ತಿಳಿದ ವಿಷಯ.

ಈ ಪ್ರಕರಣಗಳು ಠಾಣೆಯಲ್ಲಿ ವಂಚನೆ ಪ್ರಕರಣವೆಂದು ದಾಖಲಾಗುತ್ತಿದ್ದು 100 ರೂ. ವಂಚನೆ ಮಾಡಿದ ವ್ಯಕ್ತಿಗೂ, ಸಾವಿರಾರು ಕೋಟಿ ವಂಚನೆ ಮಾಡಿದ ವ್ಯಕ್ತಿ, ಸಂಸ್ಥೆಗೂ ಏಕ ರೀತಿಯ ಕಾನೂನು ಒಳಪಡುತ್ತಿದ್ದು ಇದು ವಂಚನೆ ಮಾಡುವ ಸಂಸ್ಥೆ ಅಥವಾ ಜನರಿಗೆ ಮುಕ್ತ ರಹದಾರಿ ಒದಗಿಸಿದಂತಾಗಿದೆ.

ಕೊಡಗು ಜಿಲ್ಲೆಯಲ್ಲಿ ಇಷ್ಟೆಲ್ಲಾ ಬಹುಕೋಟಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದ ಸಂದರ್ಭ ಶಕ್ತಿ ಮೂಲಕ ನಿರಂತರವಾಗಿ ತನಿಖಾ ವರದಿ ಮೂಲಕ ಮಾಹಿತಿ ಹೊರಚೆಲ್ಲಿದ ಬೆನ್ನಲ್ಲೇ ಇಂತಹ ವಂಚಕ ಕಂಪನಿಗಳು ಎಚ್ಚರಗೊಳ್ಳುವದರೊಂದಿಗೆ ಕಾಲ್ಕಿತ್ತು ಇದೀಗ ನಗರದತ್ತ ಮುಖ ಮಾಡಿರುವದು ಇತ್ತೀಚಿನ ಬೆಳವಣಿಗೆಯಾಗಿದೆ.

- ಚಂದ್ರಮೋಹನ್