ಮಡಿಕೇರಿ, ಜೂ. 29: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಚೇರಿ ನಿರ್ವಹಣೆ ಹಾಗೂ ಸಾಲಮನ್ನಾ ಯೋಜನೆ ಕುರಿತು ಶಿಕ್ಷಣ ಕಾರ್ಯಕ್ರಮ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಆಡಳಿತ ಮಂಡಳಿ ಸದಸ್ಯರು, ಲಕ್ಷಾಂತರ ಸಿಬ್ಬಂದಿಗಳು, ಕೋಟ್ಯಾಂತರ ಕುಟುಂಬ ವರ್ಗದವರು ಸಹಕಾರ ಕ್ಷೇತ್ರದಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ದೇಶದ ಪ್ರಧಾನ ಮಂತ್ರಿಗಳು ದಿನದಲ್ಲಿ 18 ಗಂಟೆ ಕಾರ್ಯಪ್ರವೃತ್ತ ರಾಗಿರುತ್ತಾರೆ. ಸಚಿವರೆಲ್ಲರೂ ಒಂದು ನಿಮಿಷವೂ ತಡಮಾಡದೆ ಸಭೆಯಲ್ಲಿ ಹಾಜರಾಗುತ್ತಾರೆ. ಅದಕ್ಕೂ ಮೊದಲು ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗು ತ್ತಾರೆ. ಹೀಗೆ ಸಿಬ್ಬಂದಿಗಳೆಲ್ಲ ಗುಣಮಟ್ಟದ ಸೇವೆ ಸಲ್ಲಿಸುವಿಕೆ, ಸಮಯಪಾಲನೆ, ಬದ್ಧತೆ, ಆತ್ಮಾವಲೋಕನ ಮಾಡಿಕೊಳ್ಳುತ್ತಾ ಸಾಗಿದಲ್ಲಿ ಪ್ರಧಾನ ಮಂತ್ರಿಗಳ ನವಭಾರತ ಕಲ್ಪನೆ ಸಾಕಾರಗೊಳ್ಳುತ್ತದೆ. ಇಂದು ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮೆಟ್ಟಿ ನಿಲ್ಲುವಷ್ಟು ಶಕ್ತಿ ಪಡೆದಿದೆ. ಹೊಸ ವಿಚಾರಗಳೊಂದಿಗೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೌಶಲ್ಯದಿಂದ ಕಾರ್ಯನಿರ್ವಹಿಸಿದಲ್ಲಿ ಸಂಘದ ಆದಾಯ ಹೆಚ್ಚುತ್ತದೆ. ಸಿಬ್ಬಂದಿಗಳೇ ಸಂಘಗಳ ಬೆನ್ನೆಲುಬು ಎಂದು ಅಭಿಪ್ರಾಯಪಟ್ಟರು.

ಕಡತಗಳ ನಿರ್ವಹಣೆ, ಸಿಬ್ಬಂದಿ ಸೇವಾ ನಿಯಮ ಹಾಗೂ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ನಿವೃತ್ತ ತಹಶೀಲ್ದಾರ್ ಬಿ.ಎಸ್. ಹಿರಿಯಣ್ಣ ಅವರು ಮಾಹಿತಿ ನೀಡಿದರು. ಸಾಲಮನ್ನಾ ಯೋಜನೆ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಡಿ. ರವಿಕುಮಾರ್ ಅವರು ಮಾಹಿತಿ ನೀಡಿದರು.

ಸ್ವಾಗತ ಹಾಗೂ ನಿರೂಪಣೆಯನ್ನು ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಗೂ ಪ್ರಾರ್ಥನೆಯನ್ನು ಆರ್. ಮಂಜುಳಾ ಅವರು ನೆರವೇರಿಸಿದರು.