ವೀರಾಜಪೇಟೆ, ಜೂ. 29: ಕೊಡಗಿನಲ್ಲಿ ಆಯ್ದ ಸ್ಥಳದಲ್ಲಿ ಎಲ್ಲ ಸೌಲಭ್ಯಗಳಿಂದ ಕೂಡಿದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಸರಕಾರ ಸ್ಥಾಪಿಸುವಂತೆ ಆಗ್ರಹಿಸಿ ಬೆಂಗಳೂರಿನಿಂದ ಕೊಡಗಿಗೆ ಬಂದ ಬೆಂಗಳೂರು ಕೊಡವ ರೈಡರ್ಸ್ ಕ್ಲಬ್‍ನ ಒಕ್ಕೂಟ ಸರಕಾರವನ್ನು ಒತ್ತಾಯಿಸುವ ದಾಗಿ ಕೊಡವ ರೈಡರ್ಸ್ ಕ್ಲಬ್ ಬೈಕ್ ರ್ಯಾಲಿ ಸಂಚಾಲಕ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಹೇಳಿದರು.

ಬೆಂಗಳೂರಿನಿಂದ ವೀರಾಜಪೇಟೆಗೆ ಆಗಮಿಸಿದ ಕೊಡವ ರೈಡರ್ಸ್ ಕ್ಲಬ್ ಬೈಕ್ ರ್ಯಾಲಿಯನ್ನು ವೀರಾಜಪೇಟೆ ಅಖಿಲ ಕೊಡವ ಸಮಾಜ ಸ್ವಾಗತಿಸಿದ ನಂತರ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಬ್ಬಯ್ಯ; ಸಮಾಜ ಸೇವಾ ಕಳಕಳಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಡವ ರೈಡರ್ಸ್ ತಂಡ ಈ ರ್ಯಾಲಿಯನ್ನು ಏರ್ಪಡಿಸಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಉತ್ತರ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ವಿತರಣೆಗೆ ಒಕ್ಕೂಟ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ ಎಂದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಮಾತನಾಡಿ ಕೊಡಗಿನ ಸಮಸ್ಯೆಗಳು ಬೇಡಿಕೆಗಳ ಕುರಿತು ಬೆಂಗಳೂರಿನ ಕೊಡವ ರೈಡರ್ಸ್ ಕ್ಲಬ್‍ನ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು. ಈ ಯುವಕರ ತಂಡದ ಬೇಡಿಕೆಗಳು ಈಡೇರುವಂತಾಗಲಿ ಎಂದು ಆಶಿಸಿದರು.

ಅಖಿಲ ಕೊಡವ ಸಮಾಜದ ಗೌರವ ಅಧ್ಯಕ್ಷ ಪ್ರೊ: ಇಟ್ಟೀರ ಬಿದ್ದಪ್ಪ ಮಾತನಾಡಿ ತಂಡದ ಬೇಡಿಕೆಗಳು ಕೊಡಗಿನ ಪರವಾಗಿದ್ದು ಪಾರದರ್ಶಕವಾಗಿದೆ. ಕೊಡಗಿನಲ್ಲಿ ಮಲ್ಟಿ ಆಸ್ಪತ್ರೆ ನಿರ್ಮಾಣದಿಂದ ಕೊಡಗಿನ ಜನತೆ ಪ್ರಯೋಜನ ಪಡೆಯಲಿದ್ದಾರೆ. ಈ ಆಧುನಿಕ ಆಸ್ಪತ್ರೆ ವೀರಾಜಪೇಟೆಯಲ್ಲಿ ಸ್ಥಾಪಿಸಿದರೆ ಈ ಆಸ್ಪತ್ರೆಗಾಗಿ ಇಲ್ಲಿನ ಜನತೆ ದೂರದ ಊರುಗಳಿಗೆ ಹೋಗುವದು ತಪ್ಪಲಿದೆ; ಇದಕ್ಕಾಗಿ ಕೊಡವ ರೈಡರ್ಸ್ ಕ್ಲಬ್ ಉತ್ತಮ ಕಾರ್ಯ ಮಾಡುತ್ತಿದೆ, ಇದಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.

ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿದರು. ವೇದಿಕೆಯಲ್ಲಿ ಸಮಾಜದ ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ ಉಪಸ್ಥಿತರಿದ್ದರು.

ಬೆಂಗಳೂರಿನಿಂದ ಸುಮಾರು 30 ಬೈಕ್, ಕಾರು ಜೀಪುಗಳಲ್ಲಿ ಬಂದ 5 ಮಂದಿ ಮಹಿಳೆಯರು ಸೇರಿದಂತೆ 65 ಮಂದಿ ತಂಡದಲ್ಲಿದ್ದರು.