ಶನಿವಾರಸಂತೆ, ಜೂ. 29: ಸರಕು ಸಾಗಾಣಿಕೆ ವಾಹನದಲ್ಲಿ ಜನ ಸಾಗಾಟ ಮಾಡುತ್ತಿದ್ದ ಬಗ್ಗೆ ಶನಿವಾರಸಂತೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ 5 ವಾಹನಗಳಲ್ಲಿ (407) ಪ್ರಯಾಣಿಕರನ್ನು ಸಾಗಿಸುತ್ತಿದ್ದಾಗ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳು ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈಗ್ಗೆ ಎರಡು ದಿನಗಳ ಹಿಂದೆ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಠಾಣಾಧಿಕಾರಿ ಎಂ.ಹೆಚ್. ಮರಿಸ್ವಾಮಿ ಸರಕು ಸಾಗಾಟ ವಾಹನಗಳ ಮಾಲೀಕರುಗಳು, ಚಾಲಕರುಗಳಿಗೆ ರಾಜ್ಯ ಉಚ್ಚನ್ಯಾಯಾಲಯದ ರಿಟ್ ಪಿಟಿಷನ್ ಆದೇಶದ ಮೇರೆ ನಿಯಮ ಪಾಲಿಸಲು ಸಭೆ ಕರೆದು ಸೂಚನೆ ನೀಡಲಾಗಿದ್ದರೂ ಸಹ ಸಂಜೆ ಸರಕು ಸಾಗಾಟದ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಾಟ ಮಾಡುತ್ತಿದ್ದಾಗ ಪೊಲೀಸರು (ಕೆಎ-13, ಬಿ-4179, (ಕೆಎ-13 ಸಿ-2768), (ಕೆಎ-13 ಸಿ-3240), ಕೆಎ-12 8087), (ಕೆಎ-13 ಬಿ-0210) 5 ವಾಹನಗಳಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಸೋಮವಾರಪೇಟೆ ನ್ಯಾಯಾಲಯ ವಾಹನಗಳ ಚಾಲಕರಿಗೆ ರೂ. 12 ಸಾವಿರ ದಂಡ ವಿಧಿಸಿದ್ದು, ಚಾಲಕರು ದಂಡ ಪಾವತಿಸಿ ಶನಿವಾರಸಂತೆ ಪೊಲೀಸ್ ಠಾಣೆಯ ಸ್ವಾಧೀನದಲ್ಲಿದ್ದ ವಾಹನಗಳನ್ನು ಬಿಡಿಸಿಕೊಂಡಿರುತ್ತಾರೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ರಘು, ಶಫಿರ್, ನಾಯಕ್ ಪಾಟಿಲ್, ಚಾಲಕ ವಿವೇಕ್ ಪಾಲ್ಗೊಂಡಿದ್ದರು.