ಮಡಿಕೇರಿ, ಜೂ. 29: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವೈದ್ಯಕೀಯ ಶಿಕ್ಷಣ ವಿಭಾಗದ ವತಿಯಿಂದ ವೈದ್ಯಕೀಯ ಸಿಬ್ಬಂದಿಗಳಿಗೆ ಮೂರು ದಿನದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಆಯೋಜಿಸ ಲಾಗಿತ್ತು. ಬೆಂಗಳೂರಿನ ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಸುನಿತಾ ಎನ್. ಅವರು ಭಾರತೀಯ ವೈದ್ಯಕೀಯ ಮಂಡಳಿಯ ವತಿಯಿಂದ ಮೇಲ್ವಿಚಾರಕರಾಗಿ ನಿಯೋಜನೆಗೊಂಡಿದ್ದು, ಕಾರ್ಯಾಗಾರದ ವೈಖರಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತೀಯ ವೈದ್ಯಕೀಯ ಮಂಡಳಿಯ ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮವನ್ನು ಅಳವಡಿಸಿದ್ದು, ಪ್ರತಿ ಕಾಲೇಜಿನ ಭೋದಕ ಸಿಬ್ಬಂದಿಗಳಿಗೆ ಅದರ ಅನುಷ್ಟಾನಕ್ಕಾಗಿ ತರಬೇತಿಗಳನ್ನು ನೀಡಲಾಗಿದೆ. ಹೊಸ ಪಠ್ಯಕ್ರಮದ ವಿವಿಧ ವಿಭಾಗಗಳನ್ನು ಅಚ್ಚುಕಟ್ಟಾಗಿ ಅಳವಡಿಸಲು ಸಂಪನ್ಮೂಲ ಸಿಬ್ಬಂದಿಯವರು ಅತ್ಯಂತ ಮುತುವರ್ಜಿಯಿಂದ ಇತರ ಸಹದ್ಯೋಗಿಗಳಿಗೆ ತರಬೇತಿ ನೀಡಿದರು ಹಾಗೂ ಇದನ್ನು ಪಠ್ಯಕ್ರಮಕ್ಕೆ ಅಳವಡಿಸಲು ಸೂಚಿಸಿದರು. ಶಿಬಿರಾರ್ಥಿಗಳು ತರಬೇತಿಯ ಮಹತ್ವವನ್ನು ಹಂಚಿಕೊಂಡರು. ಸಾಂಕೇತಿಕವಾಗಿ ಕಾಲೇಜಿನ ಆವರಣದಲ್ಲಿ ಗಿಡ ನೆಡಲಾಯಿತು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಯಿತು.