ಮೂರ್ನಾಡು, ಜೂ. 29: ರೈತರು ಒಂದೆ ಬೆಳೆಯನ್ನು ಬೆಳೆಯದೆ ಮಿಶ್ರ ಬೇಸಾಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಆಗ ಮಾತ್ರ ಅತಿವೃಷ್ಟಿ ಅನಾವೃಷ್ಟಿ ಸಮಯದಲ್ಲಿ ಬೆಳೆ ನಷ್ಟಕ್ಕೀಡಾದಾಗ ಮತ್ತೊಂದು ಬೆಳೆಯಿಂದ ಸುಧಾರಿಸಿ ಕೊಳ್ಳಬಹುದು ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ವತಿಯಿಂದ ಮೂರ್ನಾಡು ಕೊಡವ ಸಮಾಜದಲ್ಲಿ ಆಯೋಜಿಸ ಲಾದ ಕೃಷಿ ಅಭಿಯಾನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಇಲಾಖೆ ರೈತರಿರುವಲ್ಲಿ ಬಂದು ಉತ್ತಮ ಮಾಹಿತಿ ನೀಡುತ್ತಿದೆ. ಅದನ್ನು ಪ್ರತಿಯೊಬ್ಬ ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಅತಿವೃಷ್ಟಿ ಅನಾವೃಷ್ಟಿ ಸಮಯದಲ್ಲಿ ರೈತರು ಕಂಗಲಾಗಬಾರದು. ಪ್ರತಿಯೊಬ್ಬ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ರೈತ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಹೆಚ್ಚಿನ ನಷ್ಟವನ್ನು ಕಡಿಮೆ ಮಾಡಿ ಕೊಳ್ಳಬಹುದು. ಯಂತ್ರೋಪಕರಣ ಗಳತ್ತ ರೈತರು ಆಸಕ್ತಿ ತೋರಬೇಕು ಎಂದು ಕರೆ ನೀಡಿದರು.

ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ್, ಕೃಷಿ ಸಮಾಜದ ಅಧ್ಯಕ್ಷ ಮುಂಡಂಡ ಕುಟ್ಟಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಅಜ್ಜಕುಟ್ಟಿರ ಗಿರೀಶ್ ಇತರರು ಉಪಸ್ಥಿತರಿದ್ದರು. ಕೃಷಿ ವಿಸ್ತರಣಾ ಘಟಕ ಬೇಸಾಯ ತಜ್ಞ ಡಾ. ಬಸವಲಿಂಗಯ್ಯ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ. ಕೆ. ವಿರೇಂದ್ರ ಕುಮಾರ್ ಹಾಗೂ ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ವಿಜಯ್ ಅಂಗಡಿ ಸಾಂಪ್ರಾದಾಯಿಕ ಭತ್ತ ಬೆಳೆ, ಗೊಬ್ಬರ ಬಳಕೆ ಮುಂತಾದ ವಿಚಾರಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಕೃಷಿಗೆ ಸಂಬಂಧಿಸಿದ ಉಪಕರಣ, ಗಿಡಗಳ ವಸ್ತು ಪ್ರದರ್ಶನ ನಡೆಯಿತು.